ವೀರಾಜಪೇಟೆ, ಏ.೧೬: ವೀರಾಜಪೇಟೆ ತಾಲೂಕಿನ ಅರಮೇರಿಯಲ್ಲಿರುವ ಕೊಡಗು ಐರಿ ಸಮುದಾಯದ ನಿವೇಶನದಲ್ಲಿ ಐರಿ ಸಮಾಜದ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸರಕಾರ ಹಾಗೂ ಶಾಸಕರ ಅನುದಾನದಲ್ಲಿ ರೂ.೨೫ ಲಕ್ಷಗಳಲ್ಲಿ ಈ ಕಾಮಗಾರಿಗಳು ಆಗಲಿದ್ದು, ಐರಿ ಸಮಾಜದ ಭವ್ಯ ಸಮುದಾಯ ಭವನ ನಿರ್ಮಾಣವಾಗಿ ಇದರ ಸದ್ಬಳಕೆ ಮಾಡುವುದರೊಂದಿಗೆ ಉತ್ತಮವಾದ ಸಮುದಾಯ ಭವನವನ್ನು ನಿರ್ಮಿಸಿ ಇದರ ಉಪಯೋಗ ಸಮುದಾಯದ ಎಲ್ಲರಿಗೂ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ಕೊಡಗು ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್ ಮಾತನಾಡಿ, ಸಮುದಾಯದ ಏಳಿಗೆಗಾಗಿ ಕೊಡಗು ಐರಿ ಸಮಾಜದ ಸಮುದಾಯ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೊಡಗಿನಲ್ಲಿ ಎಲ್ಲಿಯೂ ಐರಿ ಸಮಾಜದ ಭವನವಿಲ್ಲ. ನೂತನವಾಗಿ ರೂ.೩ ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣವಾಗಲಿದೆ. ಈಗಾಗಲೇ ಮುಖ್ಯಂತ್ರಿಗಳ ನಿಧಿಯಿಂದ ರೂ.೧೫ ಲಕ್ಷ ಹಾಗೂ ಶಾಸಕರ ಅನುದಾನ ರೂ.೧೦ ಲಕ್ಷ ಸೇರಿ ರೂ.೨೫ ಲಕ್ಷ ಸಮಾಜ ನಿರ್ಮಾಣಕ್ಕೆ ಅನುದಾನ ಒದಗಿ ಬಂದಿದೆ. ಸಮಾಜ ಬಾಂಧವರು ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಏಳಿಗೆಗಾಗಿ ನಮ್ಮೊಂದಿಗೆ ಕೈ ಜೋಡಿಸುವುದರೊಂದಿಗೆ ಸಹಕಾರ ನೀಡಬೇಕು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷರುಗಳಾದ ಮೇಲತಂಡ ಗೋಪಾಲ್, ತಟ್ಟಂಡ ಪೂಣಚ್ಚ, ಹಿರಿಯರಾದ ಅಕ್ಕಚ್ಚಿರ ಮುದ್ದಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪೊನ್ನಿರ ಗಗನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಕಾರ್ಯದರ್ಶಿ ಕಾಮೆಯಂಡ ಗಣೇಶ್, ನಿರ್ದೇಶಕರುಗಳಾದ ಐರೀರ ಬೋಪಯ್ಯ, ಐರೀರ ಹರಿಶ್ಚಂದ್ರ, ಅಮ್ಮಣಂಡ ಪೂಣಚ್ಚ, ಐಮಂಡ ಗೋಪಾಲ್ ಸೋಮಯ್ಯ, ಪಟ್ಟಚಾರೀರ ದಿನೇಶ್ ಕಾವೇರಪ್ಪ, ಆಂಗೀರ ಸುರೇಶ್ ಸುಬ್ರಮಣಿ, ಪೊನ್ನಿರ ಗಗನ್, ಮಂಜನೈರೀರ ರವಿ ಗಣಪತಿ, ಮಂಜನೈರೀರ ಭರತ್, ಅನ್ನಂಬಿರ ಸತೀಶ್, ಆಲತಂಡ ಸೀತಮ್ಮ, ಅಂಜಪAಡ ಲವೀನ, ಮುಡಿಯಂಡ ಭೀಮಯ್ಯ ಸೇರಿದಂತೆ ಸದಸ್ಯರುಗಳು, ಸಮಾಜ ಭಾಂಧವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.