ವೀರಾಜಪೇಟೆ, ಏ. ೧೬: ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮದ ಅಂಬಟ್ಟಿ ಮಸೀದಿಯ ವಾರ್ಷಿಕ ಉರೂಸ್ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಉರೂಸ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭಾಗವಹಿಸಿದರು.
ಪ್ರತಿ ವರ್ಷದಂತೆ, ಕೆಲವು ದಿನಗಳು ನಡೆಯುವ ಈ ಉರೂಸ್ ಸಮಾರಂಭದ ಮಹತ್ವದ ಬಗ್ಗೆ ಮಾತನಾಡಿದ ಶಾಸಕರು, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಭಕ್ತರ ಒಳಿತಿಗಾಗಿ ನಡೆಯುವ ಇಂತಹ ಸಮಾರಂಭಗಳು, ನಾಡಿಗೆ ಹಾಗೂ ನಾಡಿನ ಜನತೆಗೆ ಒಳಿತು ಮಾಡಲಿ ಎಂದರು.
ಉರೂಸ್ ಅಂಗವಾಗಿ ಧಾರ್ಮಿಕ ಪಠಣಗಳು ನಡೆದವು. ಇದೇ ಸಂದರ್ಭ ಮಸೀದಿಯ ಆಡಳಿತ ಮಂಡಳಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಮಸೀದಿಯ ಧರ್ಮಗುರುಗಳು, ಸ್ಥಳೀಯರು, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಮತೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.