ಮಡಿಕೇರಿ, ಏ. ೧೬: ಸ್ಥಳೀಯ ಮಕ್ಕಳಿಂದಲೇ ರೂಪುಗೊಂಡ ಕೊಡಗಿನ ಪ್ರಥಮ ಮಕ್ಕಳ ಯಕ್ಷಗಾನ ತಂಡ ನಡೆಸಿಕೊಟ್ಟ ಎರಡು ಪ್ರಸಂಗಗಳು, ಮಡಿಕೇರಿಯ ಮೈತ್ರಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಯಶಸ್ವಿ ಪ್ರದರ್ಶನ ಕಂಡವು. ಕಲಾಕಾವ್ಯ ನಾಟ್ಯಶಾಲೆ ಪ್ರಸ್ತುತ ಪಡಿಸಿದ ವೀರ ಅಭಿಮನ್ಯು ಮತ್ತು ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನವನ್ನು ಪುಟಾಣಿ ಮಕ್ಕಳು ಅಮೋಘವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು. ಲೋಕಕಂಟಕನಾದ ಮಹಿಷಾಸುರನನ್ನು ಜಗನ್ಮಾತೆ ಸಂಹರಿಸುವ `ಶ್ರೀದೇವಿ ಮಹಾತ್ಮೆ’ ಪ್ರಸಂಗದಲ್ಲಿ ಮಹಿಷ, ದೇವಿ ಮತ್ತು ಸಿಂಹದ ಪಾತ್ರ ಮನೋಜ್ಞವಾಗಿತ್ತು.

ಕೌರವರ `ಚಕ್ರವ್ಯೂಹ’ ಬೇಧಿಸುವ ವೀರ ಅಭಿಮನ್ಯುವಿನ ಸಾಹಸಗಾಥೆಯನ್ನು ಮಕ್ಕಳು ಪ್ರಸ್ತುತಪಡಿಸಿದರು. ಭಾಗವತರ ಹಾಡು, ಚಂಡೆ ಮದ್ದಲೆಗಳ ತಾಳಕ್ಕೆ ತಕ್ಕಂತೆ ನರ್ತಿಸುತ್ತಾ, ಸಂಭಾಷಣೆ ಹೇಳುತ್ತಾ ಯಕ್ಷಗಾನ ವೈಭವಕ್ಕೆ ಕಳೆತಂದುಕೊಟ್ಟರು. ಕಲಾಕಾವ್ಯ ನಾಟ್ಯ ಶಾಲೆಯ ಮಕ್ಕಳು ಸುಳ್ಯದ ಬಾಲಕೃಷ್ಣ ನಾಯರ್ ಗರಡಿಯಲ್ಲಿ ಆರು ತಿಂಗಳ ಕಾಲ ತರಬೇತಿ ಪಡೆದಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಕಲಾಕಾವ್ಯ ನಾಟ್ಯಶಾಲೆಯ ಸ್ಥಾಪಕಿ ಕಾವ್ಯಶ್ರೀ, ಯಕ್ಷಗಾನ ಗುರುಗಳಾದ ತಾರಾನಾಥ ಸವಣೂರು, ಭಾಗÀವತರಾದ ಸುಬ್ರಾಯ ಸಂಪಾಜೆ ಹಾಗೂ ಬಾಲಭವನದ ಅಧ್ಯಕ್ಷ ರವೀಂದ್ರ ರೈ ಉಪಸ್ಥಿತರಿದ್ದರು. ಮಕ್ಕಳಿಗೆ ತರಬೇತಿ ನೀಡಿದ ಬಾಲಕೃಷ್ಣ ನಾಯರ್ ಮತ್ತು ಭರತನಾಟ್ಯ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.