ಮಡಿಕೇರಿ, ಏ. ೧೫: ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ತಾ. ೧೮ ಮತ್ತು ೧೯ರಂದು ತಿತಿಮತಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಲೂರ್ದು ಮಾತೆ ದೇವಾಲಯ ಪಾಲಿಬೆಟ್ಟ ಮತ್ತು ಫಾತಿಮಾ ಮಾತೆ ದೇವಾಲಯ ತಿತಿಮತಿ ಸಂಯುಕ್ತಾಶ್ರಯದಲ್ಲಿ ೧೫ನೇ ವರ್ಷದ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ. ತಾ.೧೮ರಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರೆ.ಡಾ.ಫ್ರಾನ್ಸಿಸ್ ಸೆರಾವೋ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಧರ್ಮಗುರು ರೆ.ಫಾ ಮರಿಯಾ ರಾಜ್ ಜಾರ್ಜ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮುದಾಯದ ೭ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕ್ರಿಕೆಟ್ ಪಂದ್ಯಾವಳಿಯನ್ನು ರ್ಯಾಲಿ ಪಟು ಸಿಬಿ ಪೌಲ್ ಹಾಗೂ ಖ್ಯಾತ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ದೇವಾಲಯದ ಗುರು ಫಾ.ಜೇಮ್ಸ್ ಡೊಮೊನಿಕ್, ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯದ ಫಾ.ಗಿಲ್ಬರ್ಟ್ ಡಿಸಿಲ್ವಾ, ಅಮ್ಮತ್ತಿ ಸಂತ ಅಂಥೋನಿ ದೇವಾಲಯದ ಗುರು ಫಾ.ಮದಲೈ ಮುತ್ತು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ಇತರರು ಪಾಲ್ಗೊಳಲಿದ್ದಾರೆ ಎಂದು ವಿವರಿಸಿದರು.
ಏ.೧೯ರಂದು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸುಭಾಷ್ ಮ್ಯಾಥ್ಯು ಅಧ್ಯಕ್ಷತೆಯಲ್ಲಿ ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಶ್ರೇಷ್ಠ ಗುರುಗಳಾದ ರೆ.ಫಾ ಜೇಮ್ಸ್ ಡೊಮಿನಿಕ್, ಮಡಿಕೇರಿ ಸಂತ ಮೈಕಲರ ದೇವಾಲಯದ ಶ್ರೇಷ್ಠ ಗುರುಗಳಾದ ರೆ.ಫಾ.ದೀಪಕ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಕ್ರೆöÊಸ್ತ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರೋಡ್ರಿಗಸ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾ.೧೮ ಮತ್ತು ೧೯ರಂದು ಟೆನ್ನಿಸ್ ಬಾಲ್ ಕ್ರಿಕೆಟ್, ಏ. ೧೯ರಂದು ಮಹಿಳೆಯರಿಗೆ ಥ್ರೋಬಾಲ್, ಮಹಿಳೆಯರು ಮತ್ತು ಪುರುಷರಿಗೆ ಹಗ್ಗಜಗ್ಗಾಟ ಏರ್ಪಡಿಸಲಾಗಿದೆ. ಕ್ರಿಕೆಟ್ ಪಂದ್ಯಾಟದ ವಿಜೇತರಿಗೆ ಪ್ರಥಮ ಬಹುಮಾನ ೫೦,೦೦೦, ದ್ವಿತೀಯ ೩೦,೦೦೦, ತೃತೀಯ ೧೦,೦೦೦, ಚತುರ್ಥ ೫,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಥ್ರೋಬಾಲ್ ವಿಜೇತರಿಗೆ ಪ್ರಥಮ ೧೦,೦೦೦, ದ್ವಿತೀಯ ೫,೦೦೦, ಮಹಿಳೆಯರು ಮತ್ತು ಪುರುಷರಿಗೆ ಹಗ್ಗಜಗ್ಗಾಟದ ವಿಜೇತರಿಗೆ ಪ್ರತ್ಯೇಕವಾಗಿ ಪ್ರಥಮ ೧೫,೦೦೦, ದ್ವಿತೀಯ ೮,೦೦೦ ನಗದು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಗೌರವಾಧ್ಯಕ್ಷ ಜೋಕಿಂ ವಾಸ್, ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್, ಜಿಲ್ಲಾ ಉಪಾಧ್ಯಕ್ಷ ಜೋಕಿಂ ರೋಡ್ರಿಗಸ್, ಯುವ ಘಟಕದ ಜಿಲ್ಲಾಧ್ಯಕ್ಷ ಶಾಲಮ್, ಸೋಮವಾರಪೇಟೆ ಘಟಕದ ಅಧ್ಯಕ್ಷ ಡೆನ್ಸಿಲ್ ವರ್ಗೀಸ್ ಹಾಜರಿದ್ದರು.