ಮಡಿಕೇರಿ, ಏ. ೧೪: ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಮುನ್ನಡೆಯುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಲಾಖೆ ಸಿಬ್ಬಂದಿಗಳಿಗೆ ಎರಡು ದಿನಗಳ ಕಾಲ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ರೀಡೆ ಎಂದರೆ ಕೊಡಗು, ಕೊಡಗು ಎಂದರೆ ಕ್ರೀಡೆ ಎಂಬAತಾಗಿದೆ. ಅತಿ ದೊಡ್ಡ ಪ್ರಮಾಣದಲ್ಲಿ ದೇಶಕ್ಕೆ ಕ್ರೀಡಾಪಟುಗಳನ್ನು ನೀಡಿದ ಹೆಮ್ಮೆ ಕೊಡಗು ಜಿಲ್ಲೆಗಿದೆ. ಬೇಸಿಗೆ ಕಾಲದಲ್ಲಿ ಜಿಲ್ಲೆಯಾದ್ಯಂತ ವಿವಿಧ ಕ್ರೀಡಾಕೂಟದ ಹಬ್ಬಗಳು ಜರುಗುವುದು ವಿಶೇಷ. ಆ ನಿಟ್ಟಿನಲ್ಲಿ ಕ್ರೀಡಾ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಜಾಗ ಇದ್ದು, ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೆ ಸಹಕಾರ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಪದ್ಧತಿಯಲ್ಲಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಸೇವಾ ಭದ್ರತೆ ಒದಗಿಸುವಂತಾಗಬೇಕು. ಹಾಗೆಯೇ ಮಿನಿ ಆರೋಗ್ಯ ಸೌಧ ನಿರ್ಮಾಣಕ್ಕೆ ಸಹಕರಿಸುವಂತೆ ಅರುಣ್ ಕುಮಾರ್ ಮನವಿ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳಾದ ಡಾ. ಆನಂದ್, ಡಾ. ಸನತ್ ಕುಮಾರ್, ಆಹಾರ ಸುರಕ್ಷತೆ ಅಧಿಕಾರಿ ಡಾ. ಅನಿಲ್ ಧವನ್, ಡಾ. ಇಂಧೂದರ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಮ್ಮಯ್ಯ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಪಾಲಾಕ್ಷ, ನವೀನ್, ದೇವರಾಜು, ಶ್ರೀನಾಥ್, ಮಂಜುನಾಥ್ ಇತರರು ಇದ್ದರು.