ಕಣಿವೆ, ಏ. ೧೪: ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವರ ವಾರ್ಷಿಕ ಪೂಜೋತ್ಸವ ವೇಳೆ ಹೆಜ್ಜೇನು ಭಕ್ತರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ದೇವರ ಉತ್ಸವ ಮೂರ್ತಿಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ಗಂಗಾ ಪೂಜೆ ನಡೆಸುತ್ತಿದ್ದ ವೇಳೆ, ದಿಢೀರನೇ ಹೆಜ್ಜೇನು ಹುಳಗಳು ಗ್ರಾಮದ ಬಹುತೇಕ ಮಂದಿಯ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ.
ಗ್ರಾಮದೇವತಾ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಅವರ ತೋಟದಲ್ಲಿ ತೆರಳಿ ಕಾವೇರಿ ನದಿಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ, ದಟ್ಟವಾದ ಮರಗಳ ಮೇಲಿಂದ ಬಂದ ಜೇನು ಹುಳುಗಳು ಒಂದೇ ಸಮನೆ ಎಲ್ಲರ ಮೇಲೆ ದಾಳಿ ಇಟ್ಟೊಡನೇ ಬಹುತೇಕ ಮಂದಿ ದೇವಾಲಯದತ್ತ ಓಡಿ ಬಂದರು. ಕೆಲವರು ತಮ್ಮ ಮನೆಗಳಿಗೆ ತೆರಳಿ ನಿಟ್ಟುಸಿರುಬಿಟ್ಟರು. ಕೆಲವರು ದೇವರಿಗೆ ತಪ್ಪು ಕಾಣಿಕೆ ಹಾಕಿ ಪ್ರಾರ್ಥಿಸಿದುದು ಕಂಡು ಬಂತು. ಅದೃಷ್ಟವಶಾತ್ ಭಕ್ತರು ಪ್ರಾಣಾಪಾಯದಿಂದ ಪಾರಾದರು.