ಕುಶಾಲನಗರ, ಏ. ೧೪: ಸಮೀಪದ ಕೂಡುಮಂಗಳೂರು ಗ್ರಾ.ಪಂನ ಸುಂದರನಗರ ಗ್ರಾಮದ ವೃಂದಾ ಬಡಾವಣೆಯಲ್ಲಿ ಅಪಾಯ ದಂಚಿನಲ್ಲಿದ್ದ ಟ್ರಾನ್ಸ್ಫಾರ್ಮರ್ ಅನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಾಂತರಿಸಲಾಯಿತು.
ಕೆಲವು ತಿಂಗಳ ಹಿಂದೆ ವೃಂದಾ ಬಡಾವಣೆಯಲ್ಲಿ ಹಸುವೊಂದು ಟ್ರಾನ್ಸ್ಫಾರ್ಮರ್ಗೆ ಸಿಲುಕಿ ದಾರುಣವಾಗಿ ಪ್ರಾಣ ಕಳೆದುಕೊಂಡಿತ್ತು. ಅನಾಹುತಗಳನ್ನು ತಪ್ಪಿಸುವ ದೃಷ್ಟಿಯಿಂದ ರಸ್ತೆ ಬದಿಯಿದ್ದ ಟ್ರಾನ್ಸ್ಫಾರ್ಮರ್ ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಕ್ಷೇತ್ರದ ಶಾಸಕರ ಬಳಿ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಚೆಸ್ಕಾಂ ಅಧಿಕಾರಿಗಳಿಗೆ ಟ್ರಾನ್ಸ್ಫಾರ್ಮರ್ ಸ್ಥಳಾಂತರಿಸಲು ಸೂಚನೆ ನೀಡಿದ್ದರು.
ಅದರಂತೆ ಚೆಸ್ಕಾಂ ಸಿಬ್ಬಂದಿಗಳು ಟ್ರಾನ್ಸ್ಫಾರ್ಮರ್ ಸ್ಥಳಾಂತರಿಸಿ ಮುಂದೆ ಉಂಟಾಗಬಹುದಿದ್ದ ಅಪಾಯವನ್ನು ತಪ್ಪಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಮಾಜಿ ಸದಸ್ಯರಾದ ಕೆ.ಬಿ ಷಂಶುದ್ದೀನ್, ಪಂಚಾಯಿತಿ ವ್ಯಾಪ್ತಿಯ ವೃಂದಾ ಬಡಾವಣೆಯಲ್ಲಿ ಹಸುವೊಂದು ವಿದ್ಯುತ್ ಅವಘಡದಿಂದ ಸಾವಿಗೀಡಾಗಿತ್ತು. ನಾಗರಿಕರು ಓಡಾಡುವ ಪ್ರದೇಶವಾಗಿದ್ದು, ಈ ಹಿನ್ನಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಅನಾಹುತಗಳನ್ನು ತಪ್ಪಿಸಲು ಶಾಸಕರ ಬಳಿ ಟ್ರಾನ್ಸ್ಫಾರ್ಮರ್ ಸ್ಥಳಾಂತರಕ್ಕೆ ಮನವಿ ಮಾಡಿದ್ದೆವು. ಇದರ ಬೆನ್ನಲ್ಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.