ಕಣಿವೆ, ಏ. ೧೪: ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ರಕ್ಷಣೆಗೆ ನೆರವಾಗಬೇಕೆಂದು ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥರಾದ ಡಾ. ಕರುಂಬಯ್ಯ ಕರೆಕೊಟ್ಟರು.
ಕೊಡಗು ಜನ ಅಭಿವೃದ್ಧಿ ಸಮಿತಿ, ಮಂಗಳೂರು ಬ್ಲಡ್ ಡೋನರ್ಸ್, ಕೂರ್ಗ್ ಬ್ಲಡ್ ಫೌಂಡೇಶನ್ ಹಾಗೂ ಕುಶಾಲನಗರದ ಸೈರಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸೈರಸ್ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯವಂತ ಮನುಷ್ಯರು ಎಷ್ಟು ಸಲ ಬೇಕಾದರೂ ರಕ್ತ ನೀಡಬಹುದು. ರಕ್ತ ಅಮೂಲ್ಯವಾದುದಾಗಿದ್ದು ರಕ್ತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಕರೆಕೊಟ್ಟರು.
ಕೊಡಗು ಜನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದಾವುದ್, ಅಧ್ಯಕ್ಷ ಚಿಕ್ಕಂಡ ಪ್ರಭು ಮಾದಪ್ಪ, ಬ್ಲಡ್ ಡೋನರ್ಸ್ ಮಂಗಳೂರು ಸಮಿತಿ ಸಂಚಾಲಕ ರೌಫ್, ಕೂರ್ಗ್ ಬ್ಲಡ್ ಫೌಂಡೇಶನ್ ಅಧ್ಯಕ್ಷ ಸಮೀರ್, ಉಪಾಧ್ಯಕ್ಷ ಆಸಿಫ್ ಇದ್ದರು. ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸಲಾಂ ರಾವತರ್ ರಕ್ತದಾನಿಗಳಿಗೆ ಹಣ್ಣು ಹಂಪಲು ನೀಡಿದರು. ೫೨ ಬಾರಿ ರಕ್ತದಾನ ಮಾಡಿದ ಕುಶಾಲನಗರದ ಪ್ರವಾಸೋದ್ಯಮಿ ಸಂತೋಷ್ ಇದ್ದರು.