ಪೆರಾಜೆ, ಏ. ೧೩: ಸುಳ್ಯ ಸಮೀಪ ಪೆರಾಜೆ ಬಳಿ ಕಲ್ಚರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಿದೆ.

ಅಂದಾಜು ೨೦ ವರ್ಷ ಪ್ರಾಯದ ಗಂಡಾನೆಯೊAದು ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ಭಾನುವಾರ ರಾತ್ರಿ ೧೧.೩೦ರ ವೇಳೆಗೆ ಬಾವಿಗೆ ಬಿದ್ದಿದೆ. ಕಾಡಿನಿಂದ ನಾಡಿಗೆ ಬಂದ ಆನೆ ಅರಣ್ಯದಂಚಿನ ತೋಟದ ಬದಿಯಲ್ಲಿಯ ಪಾಳು ಬಾವಿಗೆ ಆಯ ತಪ್ಪಿ ಬಿದ್ದಿದೆ. ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಇಂದು ಬೆಳಗ್ಗಿನಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ೫-೬ ಗಂಟೆಯ ಕಾರ್ಯಾಚರಣೆಯ ಬಳಿಕ ಆನೆಯನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಲಾಗಿದೆ. ಬಾವಿಯ ಒಂದು ಬದಿಯಿಂದ ಹಿಟಾಚಿ ಯಂತ್ರ ಬಳಸಿ ಆಳ ಮಾಡಿ ದಾರಿ ಮಾಡಿ ಕೊಡಲಾಯಿತು. ಆನೆಯು ಆ ದಾರಿಯ ಮೂಲಕ ಮೇಲಕ್ಕೆ ಬಂತು. ಘೀಳಿಡುತ್ತಾ ಮೇಲೆ ಬಂದ ಸಲಗ ಕೆಳಕ್ಕೆ ಓಡಿತು. ಆನೆಯು ತೋಟದ ಕೆಳ ಭಾಗಕ್ಕೆ ಓಡಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತು. ಬಾವಿಯಿಂದ ಮೇಲೆ ಬಂದಾಗ ಎದುರಿಗಿದ್ದ ಹಿಟಾಚಿ ಯಂತ್ರಕ್ಕೆ ಹಾದುಕೊಂಡು ಕೆಳ ಭಾಗಕ್ಕೆ ನುಗ್ಗಿತು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು ದೂರಕ್ಕೆ ಅಟ್ಟಿದರು. ಕೆಳ ಭಾಗಕ್ಕೆ ಓಡಿದ ಆನೆ ಕೆಳಭಾಗದಲ್ಲೆಲ್ಲ ಸುತ್ತಾಡಿ ಬಳಿಕ ಹಿಂತಿರುಗಿ ಬಂದು ಪೂಮಲೆ ಕಾಡಿನತ್ತ ಸಾಗಿತ್ತು. ಸುಮಾರು ೬ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಆನೆಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ಕಾಡಿಗೆ ಅಟ್ಟಲಾಯಿತು. - ಗಿರೀಶ್ ಪೆರಾಜೆ