ಮಡಿಕೇರಿ, ಏ. ೧೩; ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಗೌಡ ಜನಾಂಗದ ಕುಟುಂಬವಾರು ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾವಳಿ ಗೌಡ ಕುಟುಂಬ ಕಲರವ -೨೦೨೬ ಏರ್ಪಡಿಸಲಾಗಿದ್ದು, ಇಂದು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ.
ಮರಗೋಡುವಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಉತ್ಸವವನ್ನು ಹಿರಿಯ ಮ್ಯಾರಥಾನ್ ಓಟಗಾರ ಹೊಸೋಕ್ಲು ಚಿಣ್ಣಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು; ಕ್ರೀಡಾಪಟುಗಳಲ್ಲಿ ಶಿಸ್ತು, ಸ್ವಚ್ಛತಾ ಮನೋಭಾವವಿರಬೇಕು. ನಮ್ಮ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಕ್ರೀಡಾಪಟುಗಳು ಯಾವದೇ ಬೇಧ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಹೇಳಿದರು.
ಇವಿನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪಿ.ಕೆ.ರವಿ, ಭಾರತಿ ಗ್ಲೋಬಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮಳ್ಳಂದಿರ ಕೃಷ್ಣರಾಜು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಪೂಳಕಂಡ ಸಂದೀಪ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಮಹೇಶ್, ಇತರರಿದ್ದರು.