ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು, ಏ. ೧೩: ದಕ್ಷಿಣ ಕೊಡಗಿನ ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲುವಿನ ಅಥ್ಲಾನ್ ಟರ್ಫ್ ಮೈದಾನದಲ್ಲಿ ೬ ದಿನಗಳ ಕಾಲ ೫ ಎ ಸೈಡ್ ಮಾದರಿಯಲ್ಲಿ ನಡೆದ ದೇವಣಗೇರಿ ಮುಕ್ಕಾಟಿರ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯು ಅತ್ಯಂತ ವರ್ಣರಂಜಿತವಾಗಿ ಮುಕ್ತಾಯ ಕಂಡಿತ್ತು. ಅಂತಿಮ ಫೈನಲ್ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತು. ರಾತ್ರಿ ೮ ಗಂಟೆಗೆ ಅಂತಿಮ ಪಂದ್ಯಾವಳಿಯು ಜಮ್ಮಡ ಕೈಕೇರಿ ಹಾಗೂ ಮೇಚಂಡ ಬಾಳೆಲೆ ತಂಡಗಳ ನಡುವೆ ಹೊನಲು ಬೆಳಕಿನಲ್ಲಿ ನಡೆಯಿತು. ಪಂದ್ಯದ ಮೊದಲಾರ್ಧದಲ್ಲಿಯೇ ಜಮ್ಮಡ ಕೈಕೇರಿ ತಂಡವು ಗೋಲನ್ನು ಬಾರಿಸುವ ಮೂಲಕ ಎದುರಾಳಿ ಮೇಚಂಡ ಬಾಳೆಲೆ ತಂಡದ ಮೇಲೆ ಹಿಡಿತ ಸಾಧಿಸಿತು. ಮೇಚಂಡ ತಂಡಕ್ಕೆ ಸಿಕ್ಕಿದ ಹಲವು ಅವಕಾಶಗಳು ಗೋಲಾಗಿ ಪರಿವರ್ತನೆ ಆಗಲಿಲ್ಲ. ೨ ತಂಡಗಳು ಸಮಬಲದ ಹೋರಾಟ ನಡೆಸುವ ಮೂಲಕ ನೆರೆದಿದ್ದ ಫುಟ್ಬಾಲ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತು. ಅಂತಿಮವಾಗಿ ಜಮ್ಮಡ ತಂಡವು ಜಯದ ನಗೆ ಬೀರುವ ಮೂಲಕ ಪ್ರತಿಷ್ಠಿತ ಕೊಡವ ಫುಟ್ಬಾಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಜಮ್ಮಡ ಕೈಕೇರಿ ತಂಡದಲ್ಲಿ ಮಾಳೇಟಿರ ರಾಣಾ, ಪೊನ್ನಚಂಡ ವಿಶಾಲ್ ತಮ್ಮಯ್ಯ ಅತಿಥಿ ಆಟಗಾರರಾಗಿ ಉತ್ತಮ ಆಟ ಪ್ರದರ್ಶನ ಮಾಡಿದರು. ಮೇಚಂಡ ಬಾಳೆಲೆ ತಂಡದಲ್ಲಿ ಬುಟ್ಟಿಯಂಡ ಸೋಮಯ್ಯ ಹಾಗೂ ಪೋಡಮಾಡ ಮಂದಣ್ಣ ಅತಿಥಿ ಆಟಗಾರರಾಗಿ ಭಾಗವಹಿಸಿದ್ದರು.

ಮೇಚಂಡ ಬಾಳೆಲೆ ತಂಡವು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ವಿಜೇತ ತಂಡಕ್ಕೆ ೫೦ ಸಾವಿರ ನಗದು ಪಾರಿತೋಷಕ ಹಾಗೂ ರನ್ನರ್ ಅಪ್ ಪ್ರಶಸ್ತಿ ಪಡೆದ ಮೇಚಂಡ ಬಾಳೆಲೆ ತಂಡವು ೨೫ ಸಾವಿರ ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಕೂರ್ಗ್ ವೆಟರ್ನ್ಸ್ ಹಾಗೂ ಬೆಂಗಳೂರು ವೆಟರ್ನ್ಸ್ ನಡುವೆ ಪ್ರದರ್ಶನ ಪಂದ್ಯಾವಳಿ ನಡೆಯಿತು. ಕೊಡಗು ಫುಟ್ಬಾಲ್ ಕ್ಲಬ್‌ನ ವತಿಯಿಂದ ೧೧ ವರ್ಷದ ಒಳಗಿನ ಮಕ್ಕಳಿಗೆ ಪ್ರದರ್ಶನ ಪಂದ್ಯ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಆಯೋಜಿಸಲಾಗಿತ್ತು. ಕೊಡಗು ಫುಟ್‌ಬಾಲ್ ಕ್ಲಬ್‌ನ ಮುಖ್ಯಸ್ಥರಾದ ಐಚೆಟ್ಟಿರ ಚಂಗಪ್ಪ ಮುಂದಾಳತ್ವದಲ್ಲಿ ಈ ಪಂದ್ಯಾವಳಿಯು ಆಯೋಜನೆಗೊಂಡಿತ್ತು. ಎಳೆಯ ಮಕ್ಕಳು ಉತ್ತಮ ಪ್ರದರ್ಶನ ನೀಡುವ ಮೂಲಕ ಜನರ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ವಿಜೇತರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ,ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹಾಗೂ ಅವರ ಪತ್ನಿ ಕಾಂಚನ್ ಪೊನ್ನಣ್ಣ, ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಕಿಶನ್ ಕರುಂಬಯ್ಯ, ಡಾ.ಕಾರ್ಯಪ್ಪ, ಡಾ.ಅಮೃತ್ ನಾಣಯ್ಯ, ಮುಂತಾದ ಗಣ್ಯರು ಬಹುಮಾನ ವಿತರಿಸಿದರು. ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅತಿಥಿಗಳನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಮುಕ್ಕಾಟಿರ ಕುಟುಂಬಸ್ಥರು ಸಾಂಪ್ರಾದಾಯಿಕ ಕೊಡವ ಉಡುಪು ಧರಿಸಿ,ಮಹಿಳೆಯರು ತಳಿಯತಕ್ಕಿ ಬೊಳ್ಚದೊಂದಿಗೆ ಮೈದಾನಕ್ಕೆ ಕರೆ ತಂದರು.

ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ

ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಕಿಶನ್ ಕರುಂಬಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ,ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಮಾತ್ರವಿದೆ.ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು ಅನೇಕ ರೀತಿಯ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರುವುದರಿಂದ ಪ್ರತಿಭೆಗಳಿಗೆ ಅವಕಾಶಗಳು ಲಭಿಸುತ್ತಿವೆ. ದೇವಣಗೇರಿ ಮುಕ್ಕಾಟಿರ ಕುಟುಂಬವು ಆಯೋಜಿಸಿರುವ ೬ನೇ ವರ್ಷದ ಕೊಡವ ಕೌಟುಂಬಿಕ ಫುಟ್ಬಾಲ್ ನಮ್ಮೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯ ಕಾಣುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಹಿರಿಯರಾದ ಎಂ.ಎಸ್.ಬೋಪಣ್ಣ, ಡಾ.ಮುಕ್ಕಾಟಿರ ಅಮೃತ್ ನಾಣಯ್ಯ, ಮುಕ್ಕಾಟಿರ ಶಿಲ್ಪ ನಂಜಪ್ಪ, ಸೇರಿದಂತೆ ಕುಟುಂಬದ ಗಣ್ಯರು ಉಪಸ್ಥಿತರಿದ್ದರು. ಕುಟುಂಬದ ಆನ್ಯನಂಜಪ್ಪ, ಅರ್ಜುನ್ ಚಂಗಪ್ಪ, ಎಂ.ಎA.ಬೋಪಯ್ಯ ತಂಡ ಪ್ರಾರ್ಥಿಸಿ, ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ, ಮೂಕಚಂಡ ಸರಿತಾ ಬೊಳ್ಳಮ್ಮ ನಿರೂಪಿಸಿ, ಡಾ.ಕಾರ್ಯಪ್ಪ ಸ್ವಾಗತಿಸಿ, ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಸೋಮಯ್ಯ ವಂದಿಸಿದರು. ತಾಂತ್ರಿಕ ವಿಭಾಗದಲ್ಲಿ ಮುಕ್ಕಾಟಿರ ನಿಕ್ಕಿ ಅಪ್ಪಚ್ಚು, ಮುಕ್ಕಾಟಿರ ಮಿಲನ್ ಅಪ್ಪಚ್ಚು, ಮುಕ್ಕಾಟಿರ ರೇಹಾ ಅಪ್ಪಚ್ಚು, ಮುಕ್ಕಾಟಿರ ಶೈಲಾ ನಂಜಪ್ಪ, ಮುಕ್ಕಾಟಿರ ಪವನ್ ನಂಜಪ್ಪ, ಮುಕ್ಕಾಟಿರ ನಿವ್ಯತಂಗಮ್ಮ, ಕ್ರೀಡಾ ವಿಶ್ಲೇಷಕರಾಗಿ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ, ಹಾಗೂ ಮೂಕಚಂಡ ಸರಿತಾ ಬೊಳ್ಳಮ್ಮ ಕಾರ್ಯನಿರ್ವಹಿಸಿದರು.