ಗೋಣಿಕೊಪ್ಪಲು, ಏ. ೧೨: ಸಾರ್ವಜನಿಕರಿಂದ ಸಹಕಾರ ಪಡೆದು ಸರಕಾರದ ಯಾವುದೇ ಅನುದಾನ ಇಲ್ಲದೆ ಪಾರದರ್ಶಕ ಲೆಕ್ಕಪತ್ರ ಇಟ್ಟು, ಕುಟ್ಟ ವಲಯದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯನ್ನು ನೂತನವಾಗಿ ನಿರ್ಮಿಸಿದ್ದು ಬಹುದೊಡ್ಡ ಸಾಧನೆ ಎಂದು ವೀರಾಜಪೇಟೆ ಪೊಲೀಸ್ ಉಪವಿಭಾಗಾಧಿಕಾರಿ ಮಹೇಶ್ ಕುಮಾರ್ ನುಡಿದರು.

ಕುಟ್ಟ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ನೂತನ ವೃತ್ತನಿರೀಕ್ಷಕರ ಕಟ್ಟಡ ನಿರ್ಮಿಸಲು ಸಹಕರಿಸಿದವರಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಚೇರಿಯನ್ನು ನಿರ್ಮಿಸುವ ಸಲುವಾಗಿ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಾಮರಾಜನ್ ಅವರ ಅನುಮತಿಯ ಮೇಲೆ ಈ ಕಾರ್ಯ ನಡೆದಿದೆ. ಆದರೆ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕ ಶಿವಮೂರ್ತಿಯವರ ಸಾಧನೆಯ ಫಲ ಇದಾಗಿದೆ. ಕೇವಲ ೨ ರಿಂದ ೩ ವರ್ಷಗಳ ಕಾಲ ಒಂದು ಠಾಣೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿ ನನಗೇಕೆ ಈ ಕೆಲಸ ಎನ್ನುವ ಈ ಕಾಲಘಟ್ಟದಲ್ಲಿ ಸಾರ್ವಜನಿಕರ ಸಹಕಾರ ಪಡೆದು ನೂತನ ಕಚೇರಿ ನಿರ್ಮಿಸಿರುವುದು ಶ್ಲಾಘನೀಯ. ಒಂದು ಸತ್ಕಾರ್ಯದಿಂದ ಇನ್ನಷ್ಟು ಜನರಿಗೆ ಅದು ಪ್ರೇರೇಪಣೆ ಆಗುವುದಾದರೆ ಅದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟಿ ಶೆಟ್ಟಿಗೇರಿಯ ಮಚ್ಚಮಾಡ ಸುಮಂತ್ ಮಾತನಾಡಿ, ತಾವು ತಮ್ಮದೇ ಊರಿನ ಪೊಲೀಸ್ ಠಾಣೆ ಸುಸಜ್ಜಿತವಾಗಿರಬೇಕು. ಸಾರ್ವಜನಿಕರಿಗೆ ಉಪಯುಕ್ತವಾಗಿರಬೇಕು ಎನ್ನುವ ದೃಷ್ಠಿಯಿಂದ ಸಹಕಾರ ನೀಡಿರುವುದಾಗಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಸಾರ್ವಜನಿಕ ಸಹಕಾರದೊಂದಿಗೆ ನೂತನ ಕಟ್ಟಡ ನಿರ್ಮಾಣ ಮಾಡಿದ್ದು ಸ್ವಾಗತಾರ್ಹ, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ಜನಸ್ನೇಹಿ ಆಗುತ್ತಿರುವುದು ಶ್ಲಾಘನೀಯ. ಅಲ್ಲದೆ ತಮ್ಮೆಲ್ಲ ಒತ್ತಡಗಳ ನಡುವೆಯೂ ಕೂಡ ಮನರಂಜನೆಯ ಅವಶ್ಯಕತೆ ಇರುವುದನ್ನು ಮನಗಂಡು ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಪೊಲೀಸ್ ಸಾಂಸ್ಕೃತಿಕ ವೇದಿಕೆ ಕೂಡ ಪ್ರಾರಂಭಿಸಿರುವುದು ಇಲಾಖೆಯೊಳಗಿನ ಒಂದು ವಿಶೇಷ ಬೆಳವಣಿಗೆ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಕೃಷ್ಣ ಮಾತನಾಡಿದರು. ಇದೇ ಸಂದರ್ಭ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ೩೦ ಜನರು ಸೇರಿದಂತೆ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ವೃತ್ತನಿರೀಕ್ಷಕ ಶಿವಮೂರ್ತಿ ಅವರನ್ನು ಸಾರ್ವಜನಿಕರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕುಟ್ಟ ಠಾಣಾಧಿಕಾರಿ ತಮ್ಮಯ್ಯ, ಶ್ರೀಮಂಗಲ ಠಾಣಾಧಿಕಾರಿ ರವೀಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.