ಮಡಿಕೇರಿ, ಏ.11: ಹಸ್ತಪ್ರತಿಯನ್ನು ಉಳಿಸಲು ಹಾಗೂ ಪುನರು ಜೀವನಗೊಳಿಸಲು ಸರ್ಕಾರ 2025-26ರ ಬಜೆಟ್‍ನಲ್ಲಿ ಜ್ಞಾನ ಭಾರತಂ ಮಿಷನ್ ಎಂಬ ಮಹತ್ವಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಅವರು ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆ ಅನುಷ್ಠಾನ ಕುರಿತು ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ಅಥವಾ ಹತ್ತಿರದ ಸ್ಥಳದಲ್ಲಿ ದೊರೆಯುವ ಹಸ್ತಪ್ರತಿಗಳನ್ನು ಜ್ಞಾನ ಭಾರತಂ ಆ್ಯಪ್ ಬಳಸಿ ಅದರಲ್ಲಿ ಅಪ್ಲೋಡ್ ಮಾಡುವ ಮೂಲಕ ಸರ್ವೆ ಕಾರ್ಯದಲ್ಲಿ ನೇರವಾಗಿ ಭಾಗವಹಿಸಬಹುದು ಅಥವಾ ಜಿಲ್ಲಾ ಮಟ್ಟದ ಸರ್ವೇ ಸದಸ್ಯರಿಗೆ ನಿಮ್ಮ ಬಳಿ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ನೀಡಬಹುದಾಗಿದೆ. ಹಸ್ತ ಪ್ರತಿಗಳ ಡಿಜಿಟಲೀಕರಣದ ಮೂಲಕ ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವ ತಿಳಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಕೋರಿದರು.

ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತಪ್ರತಿಗಳ ಸಮೀಕ್ಷೆಯು ಈಗಾಗಲೇ ಆರಂಭವಾಗಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಹಸ್ತಪ್ರತಿಗಳು ಇತಿಹಾಸ, ಸಾಹಿತ್ಯ, ಸಂಸ್ಕøತಿ, ಮತ್ತು ಜ್ಞಾನದ ಮೂಲ ಆಕಾರವಾಗಿದ್ದು, ಹಸ್ತಪ್ರತಿಗಳು ಪೂರ್ವಜರ ಬೌದ್ಧಿಕ ಸಂಪತ್ತನ್ನು ದಾಖಲಿಸುತ್ತವೆ. ಆದ್ದರಿಂದ ತಾಳೆಗರಿ, ಕಾಗದ ಅಥವಾ ಇತರೆ ವಸ್ತುಗಳ ಮೇಲೆ ಕೈಯಲ್ಲಿ ಬರೆದ ದಾಖಲೆಗಳನ್ನು ಜತನ ಮಾಡುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರಾಚ್ಯವಸ್ತು ಮತ್ತು ಪ್ರವಾಸೋದ್ಯಮ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಕೊಡಗು ಜಿಲ್ಲೆಯ ಪುರಾತನ ಹಾಗೂ ಪ್ರಾಚೀನ ಕಾಲದ ಹಸ್ತಪ್ರತಿಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಅವರು ಹೇಳಿದರು.

ಹಸ್ತಪ್ರತಿಗಳು ಆಯಾಯ ಸಾಮಾಜಿಕ ಮತ್ತು ಸಾಂಸ್ಕøತಿಕ ಇತಿಹಾಸವನ್ನು ತಿಳಿಯಲು ಸಹಕಾರಿಯಾಗಿವೆ. ಪುರಾಣ, ಕಾವ್ಯ, ವ್ಯಾಕರಣ, ಆಯುರ್ವೇದ ಮತ್ತು ದರ್ಶನಶಾಸ್ತ್ರಗಳ ಅಪೂರ್ವ ಜ್ಞಾನವನ್ನು ಒಳಗೊಂಡಿವೆ ಎಂದರು. ಹಳೆಯ ಕನ್ನಡ ಮತ್ತು ಇತರೆ ಭಾಷೆಗಳ ಲಿಪಿ, ಶೈಲಿ ಮತ್ತು ಆಡು ಮಾತಿನ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಹಸ್ತಪ್ರತಿಗಳು ಅನುಕೂಲವಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ನಿರ್ದೇಶನ ನೀಡಿದರು.

ಈ ಸಂಬಂಧ ಇತಿಹಾಸ ತಜ್ಞರು, ಸಾಹಿತ್ಯಾಸಕ್ತರು, ಹಿರಿಯರು ಸೇರಿದಂತೆ ಹಲವರನ್ನು ಆಹ್ವಾನಿಸಿ ಹಸ್ತಪ್ರತಿ ಪಡೆದು ಸ್ಕ್ಯಾನ್ ಮಾಡಿ ಮತ್ತೆ ವಾಪಸ್ಸು ನೀಡುವಂತಾಗಲು ಕ್ರಮಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಶೀಘ್ರ ಪೂರ್ವಭಾವಿ ಸಭೆ ಆಹ್ವಾನಿಸುವಂತೆ ಸಲಹೆ ನೀಡಿದರು.

ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ರೇಖಾ ಅವರು ಮಾತನಾಡಿ, ಓಂಕಾರೇಶ್ವರ ದೇವಾಲಯ, ಪಾಲೂರು ಮಹಾಲಿಂಗೇಶ್ವರ ದೇವಾಲಯ, ಅರಮೇರಿ ಮಠ, ಕಿರಿಕೊಡ್ಲಿ ಮಠ, ಐನ್‍ಮನೆಗಳು, ಧವಸ ಭಂಡಾರಗಳು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹಸ್ತಪ್ರತಿಗಳು ಸಿಗಬಹುದು ಎಂದು ವಿವರಿಸಿದರು.

ಸರ್ಕಾರವು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಮೂಲಕ ಜ್ಞಾನ ಭಾರತಂ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ ಎಂದು ರೇಖಾ ಅವರು ತಿಳಿಸಿದರು.

ಜ್ಞಾನ ಭಾರತ ಮಿಷನ್‍ನ ಜಿಲ್ಲಾ ಸಮನ್ವಯಾಧಿಕಾರಿ ಕಾರ್ತಿಕೇಯನ್ ಅವರು ಮಾತನಾಡಿ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಕಾರದಲ್ಲಿ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ/ಡಿಜಿಟಲೀಕರಣ ಕೈಗೊಂಡು ಜಿಲ್ಲೆಯ ಅನನ್ಯ ಇತಿಹಾಸವನ್ನು ತಿಳಿಸುವ ಹಸ್ತ ಪ್ರತಿಗಳನ್ನು ಉಳಿಸಿಕೊಂಡು ಹೋಗುವುದು ಆದ್ಯತೆಯಾಗಿದೆ ಎಂದು ಅವರು ನುಡಿದರು.

ದೂರದೃಷ್ಟಿಯಿಂದ ಕರ್ನಾಟಕದ ಜ್ಞಾನ ಭಂಡಾರ ಹಸ್ತಪ್ರತಿಗಳು ಡಿಜಿಟಲೀಕರಣದ ವಿದೇಯಕದ ಮೂಲಕ ಕರ್ನಾಟಕ ಹಸ್ತಪ್ರತಿಗಳ ಪ್ರಾಧಿಕಾರವನ್ನು ರಚಿಸಲಾಗಿದ್ದು, ಈ ಕಾಯ್ದೆಯ ಅನ್ವಯ ಹಸ್ತಪ್ರತಿ ಹೊಂದಿರುವ ಯಾವುದೇ ವ್ಯಕ್ತಿ, ಸಂಸ್ಥೆ ಹಾಗೂ ದೇವಾಲಯ ಹಾಗೂ ಮಠಗಳು ಹಸ್ತಪ್ರತಿಗಳ ಮಾಹಿತಿ ಹಂಚಿಕೊಳ್ಳಬಹುದಾಗಿದೆ ಎಂದು ಮನವಿ ಮಾಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇ.ಪ್ರೊ ರಾಘವ ಅವರು ಹಸ್ತಪ್ರತಿ ಸಂಗ್ರಹಣೆ, ಹಸ್ತಪ್ರತಿ ಚಾರಿತ್ರಿಕ ಮಹತ್ವ, ಅಧ್ಯಯನ, ಸಂಪಾದನೆ, ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತೀನ್, ಇತರರು ಇದ್ದರು.