ಮುಳ್ಳೂರು, ಏ.11: ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾನೂನಿನ ಅರಿವು ಹೊಂದಿರಬೇಕು ಎಂದು ಶನಿವಾರಸಂತೆ ಠಾಣಾ ವೃತ್ತ ನಿರೀಕ್ಷಕ ಕೃಷ್ಣರಾಜ್ ಅಭಿಪ್ರಾಯಪಟ್ಟರು. ಅವರು ಸಮೀಪದ ಮಾಲಂಬಿ ಗ್ರಾಮದ ವಾಲ್ಮೀಕಿ ವಸತಿ ಶಾಲೆಯಲ್ಲಿ ಹಾಸನದ ಎಚ್.ಡಿ ದೇವೇಗೌಡ ಪ್ರಥಮ ದರ್ಜೆ ಕಾಲೇಜಿನ ಸ್ನಾತ್ತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗ್ರಾಮೀಣ ಸಮುದಾಯ ಸಮಾಜ ಸೇವಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದು ಹಣದ ವ್ಯಾಮೋಹ ಹೆಚ್ಚಾಗಿ ಜನರು ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ದುರಂತಮಯವಾಗಿದೆ, ವಂಚಕರು ಮೊಬೈಲ್‍ನಲ್ಲಿ ಯಾವುದೋ ಭಾಷೆಯಲ್ಲಿ ಕರೆ ಮಾಡಿ ಹಣ ವಂಚನೆ ಮಾಡುತ್ತಿರುವ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು ಎಂದರು. ಇಂದು ಪೊಲೀಸ್ ಠಾಣೆಗಳು ಜನಸ್ನೇಹಿ ಠಾಣೆಯಾಗಿ ಬದಲಾವಣೆಯಾಗುತ್ತಿವೆ, ಯಾರೂ ಸಹ ಏನೇ ಸಮಸ್ಯೆಯಾದರೂ ಭಯ ಪಡದೆ ದೂರು ನೀಡಬಹುದಾಗಿದೆ ಎಂದು ಹೇಳಿದರು.

ಯುವ ಸಮುದಾಯ ಮತ್ತು ವಿದ್ಯಾರ್ಥಿಗಳು ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರುವುದರ ಜೊತೆಯಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ಅಪ್ರಾಪ್ತರಿಗೆ ಪೋಷಕರು ವಾಹನ ಚಾಲನೆಗೆ ಅವಕಾಶ ಮಾಡಿಕೊಡಬಾರದು ಎಂದರು.

ಹೆಚ್.ಡಿ ದೇವೇಗೌಡ ಕಾಲೇಜಿನ ಎಂಎಸ್‍ಡಬ್ಲ್ಯೂ ವಿಭಾಗದ ನಿವೃತ್ತ ಪ್ರಾಂಶುಪಾಲ ನಾರಾಯಣ ಮಾತನಾಡಿ, ಕಾನೂನಿನ ಅರಿವು ಇದ್ದರೂ ಸಹ ಕೆಲವರು ಅಪರಾಧ ಚಟುವಟಿಕೆಯಲ್ಲಿ ತೊಡಗಿರುವುದು ದುರಂತ, ಸಾರ್ವಜನಿಕರು, ಯುವ ಸಮೂಹದವರು ಕಾನೂನು ಪಾಲನೆ ಮಾಡುವಂತೆ ಮನವಿ ಮಾಡಿದರು.

ಕಾಲೇಜು ಪ್ರಾಂಶುಪಾಲ ವಿಶ್ವನಾಥ್ ಮಾತನಾಡಿ, ಇಂದು ಪೋಷಕರು ತಮ್ಮ ಮಕ್ಕಳ ಮೇಲೆ ಹದ್ದಿನ ಕಣ್ಣು ಇಡಬೇಕಾದ ಅನಿವಾರ್ಯತೆ ಬಂದೊದಗಿದೆ, ಪೋಷಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ಎಚ್ಚರವಹಿಸಬೇಕು ಮತ್ತು ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಭುವನೇಂದ್ರ ಮಾತನಾಡಿದರು. ಸಮಾರಂಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ್, ಆಲೂರು ಸಿದ್ದಾಪುರ ಕೃಷಿಪತ್ತಿನ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ರಮೇಶ್ ಶಿಬಿರದ ಸಂಯೋಜನಾಧಿಕಾರಿ ಮತ್ತು ಸಹ ಪ್ರಾಧ್ಯಾಪಕ ಡಾ.ಎಚ್.ಎನ್ ದೀಪು, ಪ್ರಾಧ್ಯಾಪಕರಾದ ವೆಂಕಟೇಶ್, ರೇಖಾಶ್ರೀ ಮುಂತಾದವರು ಇದ್ದರು.