ವಾಷಿಂಗ್‍ಟನ್, ಏ.11: 5 ದಶಕಗಳ ಬಳಿಕ ಮತ್ತೇ ಚಂದ್ರನೆಡೆಗೆ ಸಾಗಿ ಇತಿಹಾಸ ಸೃಷ್ಟಿಸಿದ ನಾಸಾ ಆರ್ಟಿಮಿಸ್-2 ಗಗನಯಾತ್ರಿಕರಾದ ರೀಡ್ ವೈಸ್‍ಮ್ಯಾನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಹಾಗೂ ಜೆರೆಮಿ ಹ್ಯಾನ್ಸನ್ ಅವರುಗಳು ಇಂದು ಮುಂಜಾನೆ ಸುರಕ್ಷಿತವಾಗಿ ಪೆಸಿಫಿಕ್ ಮಹಾಸಾಗರದಲ್ಲಿ ಬಂದಿಳಿದರು. 10 ದಿನಗಳ ಪಯಣದಲ್ಲಿ ತಮಗೆ ಆಶ್ರಯವಾಗಿದ್ದ ಒರಯನ್- ಇಂಟಿಗ್ರಿಟಿ ಹೆಸರಿನ ನೌಕೆಯು ಮುಂಜಾನೆ ಭಾರತ ಸಮಯ - 5:30 ಕ್ಕೆ ಅಮೇರಿಕಾ ಪಶ್ಚಿಮದ ಸ್ಯಾನ್ ಡಿಯೇಗೋ ಕರಾವಳಿ ಪ್ರದೇಶದ ಕಡಲಾಚೆಯ ಪೆಸಿಫಿಕ್ ಮಹಾಸಾಗರದಲ್ಲಿ ಭೂ-ಸ್ಪರ್ಶ ಮಾಡಿತು. ಇದಕ್ಕಿಂದ 10 ನಿಮಿಷಗಳ ಮುನ್ನ ಭೂಮಿಯ ವಾತಾವರಣ ಪ್ರವೇಶಿಸಿದ ನೌಕೆಯು 2 ಹಂತಗಳ ಪ್ಯಾರಶೂಟ್‍ಗಳ ಸಹಕಾರದಲ್ಲಿ ತನ್ನ ವೇಗ ಕಡಿತಗೊಳಿಸಿತು. ಅತ್ಯಾಧುನಿಕ ಹೀಟ್ ಶೀಲ್ಡ್ ನೌಕೆಯು ಸುಟ್ಟು ಭಸ್ಮವಾಗದಂತೆ ರಕ್ಷಣೆ ನೀಡಿತು. ನಾಸಾದ ರಕ್ಷಣಾ ತಂಡ, ಹಡಗು ಮೂಲಕ ನೀರಿನಲ್ಲಿ ತೇಲುತ್ತಿದ್ದ ನೌಕೆ ಹಾಗೂ ಗಗನಯಾತ್ರಿಕರನ್ನು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಿತು. ಗಗನಯಾತ್ರಿಕರ ಆರೋಗ್ಯ ಉತ್ತಮವಾಗಿರುವುದಾಗಿ ನಾಸಾ ವೈದ್ಯರು ಮಾಹಿತಿ ನೀಡಿದ್ದಾರೆ.

ಹಲವು ದಾಖಲೆಗಳು

5 ದಶಕಗಳ ಬಳಿಕ ನಾಸಾ ಕೈಗೊಂಡ ಐತಿಹಾಸಿಕ ಚಂದ್ರ ಪರಿಭ್ರಮಣಾ ಯೋಜನೆ ಹಲವಾರು ದಾಖಲೆಗಳನ್ನು ನಿರ್ಮಿಸಿತು.

ಮಾನವನು ಭೂಮಿಯಿಂದ ಅತಿದೂರ ಸಾಗಿದ ದಾಖಲೆ (4 ಲಕ್ಷ 6 ಸಾವಿರದ 771 ಕಿ.ಮಿ), ಮಾನವನು ಕ್ರಮಿಸಿರುವ ಅತಿ ಹೆಚ್ಚು ವೇಗ (ಗಂಟೆಗೆ 40,000 ಕಿ.ಮಿ ಭೂ-ವಾತಾವರಣ ಪ್ರವೇಶ ಸಂದರ್ಭ), ಚಂದ್ರ ಪರಿಭ್ರಮಿಸಿದ ಮೊದಲ ಮಹಿಳೆ - ಕ್ರಿಸ್ಟಿನಾ ಕೋಚ್, ಚಂದ್ರ ಪರಿಭ್ರಮಿಸಿದ ಮೊದಲ ಕರಿವರ್ಣದ ವ್ಯಕ್ತಿ - ವಿಕ್ಟರ್ ಗ್ಲೋವರ್, ಮೊದಲ ಬಾರಿಗೆ ಚಂದ್ರ ಪರಿಭ್ರಮಿಸಿದ ಅಮೇರಿಕಾವಲ್ಲದ ಇತರ ದೇಶದವರು (ಕೆನಡಾದ ಜೆರೆಮಿ ಹ್ಯಾನ್ಸನ್), ಸÉೀರಿದಂತೆ ಇತರ ದಾಖಲೆಗಳು ನಿರ್ಮಾಣವಾದವು.

4 ಗಗನಯಾತ್ರಿಕರು ತಮ್ಮ ಪಯಣದಲ್ಲಿ ಭೂಮಿಯಿಂದ ಅಗೋಚರವಾಗಿರುವ ಚಂದ್ರನ ಹಿಂಬದಿ ಪದರ ಹಾಗೂ ಸೂರ್ಯ ಗ್ರಹಣವನ್ನೂ ವೀಕ್ಷಿಸಿದರು. ಸುಮಾರು 7 ಸಾವಿರ ಚಿತ್ರಗಳನ್ನು ಈ ಸಂದರ್ಭ ಸೆರೆಹಿಡಿದರು.