ಮಡಿಕೇರಿ,ಏ.11: ಮಡಿಕೇರಿ ನಗರ ಸೇರಿದಂತೆ ಸೋಮವಾರಪೇಟೆ ಉಪವಿಭಾಗ ಹಾಗೂ ವೀರಾಜಪೇಟೆ ಉಪ ವಿಭಾಗದ ಹಲವೆಡೆ ನಡೆದ ಕಳ್ಳತನ ಪ್ರಕರಣದಲ್ಲಿ ಕಳವಾಗಿದ್ದ ಹಣ ಚಿನ್ನಾಭರಣ, ಬೆಳ್ಳಿ ಸಾಮಗ್ರಿ, ಕಾಫಿ, ಕರಿಮೆಣಸು, ವಾಹನಗಳು ಮುಂತಾದುವನ್ನು ವಶಪಡಿಸಿಕೊಂಡ ಕೊಡಗು ಜಿಲ್ಲಾ ಪೊಲೀಸರು ಅವುಗಳನ್ನು ವಾರೀಸುದಾರರಿಗೆ ಹಸ್ತಾಂತರ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ; ವಿವಿಧ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿ ಅವರುಗಳಿಂದ ಒಟ್ಟು ರೂ.6 ಲಕ್ಷಕ್ಕೂ ಅಧಿಕ ನಗದು ಸೇರಿದಂತೆ ಚಿನ್ನಾಭರಣ, ಕಾಫಿ, ಕರಿಮೆಣಸು, ವಾಹನಗಳನ್ನು ವಶಪಡಿಸಿಕೊಂಡಿರುವದಾಗಿ ತಿಳಿಸಿದರು.

ಮಡಿಕೇರಿ

ಮಡಿಕೇರಿ ನಗರದ ಎಫ್‍ಎಂಸಿ ಕಾಲೇಜು ಹಿಂಭಾಗದ ನಿವಾಸಿ ಡಾ. ಪಾರ್ಥಸಾರಥಿ ಎಂಬವರ ಸಹೋದರ ವಯೋವೃದ್ಧರಾಗಿದ್ದು, ಅವರನ್ನು ನೋಡಿಕೊಲ್ಳುವ ಸಲುವಾಗಿ ಕೊಪ್ಪಳ ಜಿಲ್ಲೆಯ 4ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಮಹಂತೇಶ ಪೂಜಾರ ಎಂಬಾತನನ್ನು ನೇಮಕ ಮಾಡಲಾಗಿತ್ತು. ಕಳೆದ ತಾ.28-2-2026ರಂದು ಮನೆಯಲ್ಲಿಟ್ಟಿದ್ದ 137 ಗ್ರಾಂ ಚಿನ್ನಾಭರಣ, ರೂ. 5,09,000 ನಗದು ಹಾಗೂ ಒಂದು ಮೊಬೈಲ್ ಕಳವಾಗಿತ್ತು. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡ ಮಡಿಕೇರಿ ನಗರ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿ ಹೆಸರು ಬದಲಾಯಿಸಿಕೊಂಡು ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡಿರುವದು ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಹಿಪ್ಪರಗಿ ತಾಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ(27) ಎಂಬಾತನನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸ್ವತ್ತುಗಳನ್ನು ವಶಪಡಿಸಿಕೊಂಡಿರುವದಾಗಿ ತಿಳಿಸಿದರು.

ಪೊನ್ನಂಪೇಟೆ

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೀಳೂರು ಗ್ರಾಮದ ಆದೇಂಗಡ ಕುಟುಂಬದ ಐನ್‍ಮನೆಯಲ್ಲಿದ್ದ ಪೊನ್ನಪ್ಪಸಂತೆಯ ಕಲ್ಲುಗುಡ್ಡೆ ಈಶ್ವರ ದೇವಸ್ಥಾನದ ಪಾರಂಪರಿಕ 40ಗ್ರಾಂ ಚಿನ್ನ ಹಾಗೂ 2.5 ಕೆ.ಜಿ. ಬೆಳ್ಳಿಯ ಆಭರಣಗಳು ಕಳವಾಗಿರುವ ಬಗ್ಗೆ ತಾ. 23-2-26ರಂದು ದೂರು ದಾಖಲಾಗಿತ್ತು. ವಿಶೇಷ ತಂಡ ರಚಿಸಿ ತನಿಖೆ ನಡೆಸಿದ ಸಂದರ್ಭ ಸುಳುಗೋಡುವಿನ ಕ್ಯಾಲಿ ಕುಟ್ಟಪ್ಪ(19), ಹಾತೂರು ಗ್ರಾಮದ ವಿ.ಎಸ್,ಯಶ್ವಂತ್ (20), ಹಾಸನದ ತೇಜೂರು ಗ್ರಾಮದ ಹರ್ಷನ್(19) ಹಾಗೂ ಮೈಸೂರು ಬೋಗಾದಿಯ ಶ್ರೇಯಸ್(24) ಎಂಬವರುಗಳು ಕಳವು ಮಾಡಿರುವ ಬಗ್ಗೆ ತಿಳಿದು ಬಂದ ಮೇರೆಗೆ ನಾಲ್ವರನ್ನು ಬಂದಿಸಿ ಅವರುಗಳಿಂದ ರೂ.50700 ನಗದು, 2.422 ಕೆ.ಜಿ. ಬೆಳ್ಳಿ, 5.5 ಗ್ರಾಂ ಚಿನ್ನ, ಒಂದು ದ್ವಿಚಕ್ರ ವಾಹನ, ನಾಲ್ಕು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕುಶಾಲನಗರ

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಚಿನ್ನಾಭರಣ, ಕಾಫಿ ಹಾಗೂ ಎರಡು ಕಾರು ಕಳವು ಮಾಡಿರುವ ಬಗ್ಗೆ ಮೂರು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಸಂದರ್ಭ ಚಿನ್ನಾಭರಣ ಕಳವು ಮಾಡಿದ ಆರೋಪಿ ಬೈಚನಹಳ್ಳಿಯ ಮೊಹಮ್ಮದ್ ಯೂನಸ್(38), ಕಾಫಿ ಹಾಗೂ ಕಾರು ಕಳವು ಮಾಡಿದ ಬೈಲುಕುಪ್ಪೆಯ ಸುನಿಲ್(34), ರಾಜು(24), ಶರತ್(24), ಹರೀಶ್(35), ಬಿಹಾರದ ಜಿತೇಂದ್ರ ಕುಮಾರ್ ರಾಮ್(38), ದಿನೇಶ್ ರಾವತ್(44) ಅವರುಗಳನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂದಿತರಿಂದ 63.19 ಗ್ರಾಂ ಚಿನ್ನ, 6495 ಕೆ.ಜಿ. ಕಾಫಿ, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಸುಂಟಿಕೊಪ್ಪ

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಚಿನ್ನಾಭರಣ, ಕಾಫಿ ಹಾಗೂ ಕರಿಮೆಣಸು ಕಳವಾಗಿರುವ ಬಗ್ಗೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗಿ ಚಿನ್ನಾಭರಣ ಕಳವು ಮಾಡಿದ ಮಹಾರಾಷ್ಟ್ರದ ಅಲ್ಬನಾ ವೀರು ಜಾದವ್(37), ಬಬಿತಾ ಬಿರ್ಜು ಮಾಳಿ(48), ಪೂಜಾ ರೋಹಿತ್ ಜಾದವ್(27), ಕಾಫಿ ಕಳವು ಮಾಡಿದ ಕಾನ್‍ಬೈಲ್‍ನ ದೀಕ್ಷಿತ್(21), ಮನೋಜ್(23), ನಾಕೂರು ಶಿರಂಗಾಲದ ವಿನೋದ್(21), ನಕಲಿ ಚಿನ್ನ ಮಾರಾಟಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೇಲಂನ ಚಿಣ್ಣಮ್ಮಜ್ಜಿ (35), ಕರಿಮೆಣಸು ಕಳವು ಮಾಡಿದ ಕೇರಳ ಮಾನಂದವಾಡಿಯ ಉಬೈದ್(35), ಪೆರಂಬಾಡಿಯ ದರ್ಶನ್(26), ಸಫೀಕ್(28), ಮೈಸೂರು ಶಾಂತಿನಗರದ ಶಾಕಿರ್(26) ಎಂಬವರುಗಳನ್ನು ಬಂದಿಸಿ ಅವರುಗಳಿಂದ 22.60 ಗ್ರಾಂ ಚಿನ್ನ, 5 ಚೀಲ ಪಾರ್ಚ್‍ಮೆಂಟ್ ಕಾಫಿ, 50 ಸಾವಿರ ನಗದು ಹಾಗೂ 75 ಕೆ.ಜಿ. ಕರಿಮೆಣಸು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಮಾಹಿತಿ ನೀಡಿದರು.

ಇದರೊಂದಿಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 54 ಮೊಬೈಲ್‍ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಎಸ್‍ಪಿ ತಿಳಿಸಿದರು.

ವಾರೀಸುದಾರರಿಗೆ ಹಸ್ತಾಂತರ

ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಸ್ವತ್ತುಗಳನ್ನು ಇದೇ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿಗಳು ವಾರೀಸುದಾರರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭ ಡಿವೈಎಸ್‍ಪಿಗಳಾದ ಸೂರಜ್, ಮಹೇಶ್, ದಿನೇಶ್ ಕುಮಾರ್, ಚಂದ್ರಶೇಖರ್, ಲಕ್ಷ್ಮಿಕಾಂತ್ ತಳವಾರ್, ವೃತ್ತ ನಿರೀಕ್ಷಕರುಗಳಾದ ಪಿ.ಕೆ. ರಾಜು ರೈ, ಪಿ. ಮೇದಪ್ಪ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.