ಪೊನ್ನಂಪೇಟೆ, ಏ. ೧೨: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೂರನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಮೂರನೇ ದಿನದಾಟದಲ್ಲಿ ಅಂಜಿಗೇರಿ ನಾಡ್ ಮತ್ತು ಕೂರ್ಗ್ ಟೈಟಾನ್ಸ್ ತಂಡ ಜಯಭೇರಿ ಬಾರಿಸಿದವು.

ತಾ. ೧೨ ರ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಂಜಿಗೇರಿ ನಾಡ್ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದು ಕೊಂಡು ೧೩೭ ರನ್ ಗಳಿಸಿತು. ಮಂಜು ಕೆ.ಬಿ. ೪೪ ಎಸೆತಗಳಲ್ಲಿ ೪೫ ರನ್ ಗಳಿಸಿದರು. ಟೀಮ್ ಲೆವರೇಜ್ ಪರ ಕೇಕಡ ದೇವಯ್ಯ ೪ ವಿಕೆಟ್ ಕಬಳಿಸಿದರು. ಗುರಿ ಬೆನ್ನಟ್ಟಿದ ಟೀಮ್ ಲೆವರೇಜ್ ತಂಡ ೧೯.೪ ಓವರ್‌ಗಳಲ್ಲಿ ೧೨೦ ರನ್ ಗಳಿಸಿ ಸೋಲನುಭವಿಸಿತು. ಪೂವಯ್ಯ ಪಿ.ಟಿ ೩೭ ಎಸೆತಗಳಲ್ಲಿ ೫೬ ರನ್ ಗಳಿಸಿದರು.

ಅಂಜಿಕೇರಿ ನಾಡ್‌ನ ಆಕರ್ಷ್ ಪೂವಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಕೂರ್ಗ್ ಬ್ಲಾಸ್ಟರ್ಸ್ ಮತ್ತು ಕೂರ್ಗ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಬ್ಲಾಸ್ಟರ್ಸ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೫೫ ರನ್ ಗಳಿಸಿತು. ದರ್ಶನ್ ಮಾಚಯ್ಯ ೧೬ ಎಸೆತಗಳಲ್ಲಿ ೩೧ ರನ್ ಬಾರಿಸಿದರು. ಕೂರ್ಗ್ ಟೈಟಾನ್ಸ್ ಪರ ಪ್ರತೀಕ್ ನಂಜಪ್ಪ ೨ ವಿಕೆಟ್ ಪಡೆದರು. ೧೫೬ ರನ್‌ಗಳ ಗುರಿ ಬೆನ್ನಟ್ಟಿದ ಕೂರ್ಗ್ ಟೈಟಾನ್ಸ್ ತಂಡ ೪ ವಿಕೆಟ್ ಕಳೆದುಕೊಂಡು ೬ ವಿಕೆಟ್‌ಗಳ ಜಯಭೇರಿ ಬಾರಿಸಿತು. ರಾಫಾ ಪೂಣಚ್ಚ ೩೫ ಎಸೆಗಳಲ್ಲಿ ೪೨ ರನ್ ಬಾರಿಸಿದರು. ಕೂರ್ಗ್ ಬ್ಲಾಸ್ಟರ್ಸ್ ಪರ ಸಮೃದ್ ಚೆಂಗಪ್ಪ ೨ ವಿಕೆಟ್ ಪಡೆದರು. ಕೂರ್ಗ್ ಟೈಟಾನ್ಸ್ನ ಡೆಲ್ ವಿನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. - ಚನ್ನನಾಯಕ