ಶ್ರೀಮಂಗಲ, ಏ. 11: ಪೆÇನ್ನಂಪೇಟೆ ತಾಲೂಕು ಕುಟ್ಟ ಸಮೀಪ ಕಾಯಿಮಾನಿ ಬಳಿ ಕಾಫಿ ತೋಟದಿಂದ ಶ್ರೀಮಂಗಲ - ಕುಟ್ಟ ಮುಖ್ಯ ರಸ್ತೆ ದಾಟುತ್ತಿದ್ದ ಕಾಡಾನೆಯನ್ನು ಕಂಡು ಭಯಗೊಂಡ ಸ್ಕೂಟರ್ ಸವಾರ ಆನೆಯಿಂದ ಪಾರಾಗುವ ಧಾವಂತದಲ್ಲಿ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಕಾಯಿಮಾನಿ ಕಾಫಿ ಮಿಲ್ ಸಮೀಪ ಘಟನೆ ನಡೆದಿದ್ದು, ಕುಟ್ಟ ಸಮೀಪ ಪೂಜೆಕಲ್ ನಿವಾಸಿ ಆರ್ಮುಗಮ್ (65) ಗಾಯಗೊಂಡವರಾಗಿದ್ದಾರೆ. ಘಟನೆ ನಡೆದ ಸಂದರ್ಭ ಕಾಡಾನೆ ರಸ್ತೆಗೆ ಬಿದ್ದ ಸವಾರನತ್ತ ಗಮನ ಹರಿಸದೇ ಕಾಫಿ ತೋಟಕ್ಕೆ ನುಗ್ಗಿ ಮುಂದೆ ಸಾಗಿದೆ.

ಅಲ್ಲಿಯೇ ಶ್ರೀಮಂಗಲ ಅರಣ್ಯ ಇಲಾಖೆಯ ಸಿಬ್ಬಂದಿ ಬೀಟ್‍ನಲ್ಲಿದ್ದವರಿಗೆ ವಿಷಯ ತಿಳಿದು, ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮೊಣಕಾಲಿಗೆ ಗಾಯವಾಗಿರುವ ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ. ಬುಧುವಾರ ಕಾಯಿಮಾನಿ ನಿವಾಸಿ ಮೂಕಳಮಾಡ ರತ್ತು ಕಾಡಾನೆ ದಾಳಿಗೆ ಬಲಿಯಾದ ಹಿನ್ನಲೆ, ಮುನ್ನೆಚ್ಚರಿಕೆ ಕ್ರಮವಾಗಿ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಶಾಸಕ ಅಜ್ಜಿಕುಟ್ಟಿರ ಪೆÇನ್ನಣ್ಣ ಅವರು ಮುಖ್ಯ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬೀಟ್‍ನಲ್ಲಿರುವಂತೆ ಸೂಚನೆ ನೀಡಿದ್ದು, ಸಾರ್ವಜನಿಕರಿಂದ ಕಾಡಾನೆ ಇರುವಿಕೆ ಬಗ್ಗೆ ಮಾಹಿತಿ ಬಂದ ತಕ್ಷಣ ನಿಗಾ ಇಡುವಂತೆ ಸೂಚಿಸಿದ್ದಾರೆ. ಈ ಹಿನ್ನಲೆ, ಮುಖ್ಯ ರಸ್ತೆ, ಕಾಡಾನೆ ಇರುವಿಕೆಯ ಸುಳಿವು ಇರುವೆಡೆ ಅರಣ್ಯ ಇಲಾಖೆ ಬೀಟ್ ಕೈಗೊಂಡಿದೆ. ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಅರವಿಂದ್ ನೇತೃತ್ವದಲ್ಲಿ ಕುಟ್ಟ - ಕಾಯಿಮಾನಿ ಸುತ್ತಮುತ್ತ ಬೆಳಿಗ್ಗೆ 6 ರಿಂದ ಸಂಜೆ 8 ರವರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.