ವೀರಾಜಪೇಟೆ, ಏ. 11: ವೀರಾಜಪೇಟೆ ನಾಗರಿಕ ಸಮಿತಿ ಮತ್ತು ಸಾರ್ವಜನಿಕ ಕಾರ್ಯಕರ್ತರ ಕೂಟದ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ವೀರಾಜಪೇಟೆ ಪುರಸಭೆಯ ಆಡಳಿತ ವ್ಯವಸ್ಥೆ ವಿರುದ್ಧ ಹಾಗೂ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ನಾಗರಿಕ ಸಮಿತಿಯ ಪ್ರಮುಖ ಹಾಗೂ ವಕೀಲ ಕೆ.ವಿ. ಸುನಿಲ್ ಮಾತನಾಡಿ, ಪುರಸಭೆಯಲ್ಲಿ ನಡೆದ ಟೆಂಡರ್ನಲ್ಲಿ ಅನ್ಯಾಯವಾಗಿದೆ. ಕಳೆದ ಬಾರಿಗಿಂತ ಸುಮಾರು ಹದಿನೆಂಟು ಲಕ್ಷ ರೂಪಾಯಿ ಕಡಿಮೆ ಬೆಲೆಗೆ ಟೆಂಡರ್ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ರಸ್ತೆ ಅಗಲೀಕರಣ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ. ತಕ್ಷಣ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಸತೀಶ್ ಮಾತನಾಡಿ, ಪುರಸಭೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ತಕ್ಷಣ ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ವೀರಾಜಪೇಟೆ ನಾಗರಿಕ ಸಮಿತಿ ಮತ್ತು ಸಾರ್ವಜನಿಕ ಕಾರ್ಯಕರ್ತರ ಕೂಟದ ಸಂಯುಕ್ತ ಹೋರಾಟ ಸಮಿತಿಯ ಸಂಚಾಲಕ ಡಾ. ದುರ್ಗಾ ಪ್ರಸಾದ್ ಮಾತನಾಡಿ, ಶಾಸಕರು ವೀರಾಜಪೇಟೆ ಪುರಸಭೆಗೆ ಬಿಡುಗಡೆಗೊಳಿಸಿದ ಸುಮಾರು ರೂ. 20 ಕೋಟಿ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ಕಳೆದ ಬಾರಿಯ ಸದಸ್ಯರ ಪ್ರಸ್ತುತ ಆಸ್ತಿಯ ಬಗ್ಗೆ ತನಿಖೆ ನಡೆಸುವಂತೆ ಹಕ್ಕೊತ್ತಾಯ ಮಂಡಿಸಿದರು.
ಮುಖ್ಯ ರಸ್ತೆ ಅಗಲೀಕರಣ ಹೆಸರಿನಲ್ಲಿ ಕೆಡವುವ ಕಟ್ಟಡ ಮಾಲೀಕರುಗಳಿಗೆ ಸೂಕ್ತ ಪರಿಹಾರ ನೀಡಬೇಕು. ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮತ್ತು ಗುತ್ತಿಗೆದಾರರ ಬಗ್ಗೆ ಸಂಪೂರ್ಣ ವಿವರಗಳನ್ನು ಜನರ ಮುಂದೆ ಇಡಬೇಕು. ಪುರಸಭೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಮೀನುಪೇಟೆಯಲ್ಲಿರುವ ಮೊಬೈಲ್ ಟವರ್ ತೆರವುಗೊಳಿಸಬೇಕೆಂಬ ಜಿಲ್ಲಾಧಿಕಾರಿಯವರ ಆದೇಶವನ್ನು ಕಾರ್ಯಗತಗೊಳಿಸಬೇಕು. ಖಾಸಗಿ ವ್ಯಕ್ತಿಗಳ ಲೇಔಟ್ಗಳಿಗೆ ಸರಕಾರದ ಖರ್ಚಿನಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಮಾಡಿಕೊಡುವುದನ್ನು ನಿಲ್ಲಿಸಬೇಕು. ನಗರದಲ್ಲಿ ಹಲವು ಉಪರಸ್ತೆಗಳಿದ್ದು ಅವುಗಳನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿಕೊಂಡಿದ್ದಾರೆ. ಈ ಅತಿಕ್ರಮಣವನ್ನು ತೆರವುಗೊಳಿಸಿ ರಸ್ತೆಗಳನ್ನು ಸಂಚಾರ ಯೋಗ್ಯವನ್ನಾಗಿಸಬೇಕು. ಅಭಿವೃದ್ದಿ ಹೆಸರಿನಲ್ಲಿ ಗೌರಿಕೆರೆ ಛತ್ರಕೆರೆಗಳಲ್ಲಿ ಕೈಗೊಂಡ ಯೋಜನೆಗೆ ಬಿಡುಗಡೆಯಾದ ಹಣದ ಮತ್ತು ನಾಗವನ ಸ್ಥಾಪನೆಗೆ ಮೀಸಲಿಟ್ಟಿರುವ ಮೊತ್ತದ ಬಗ್ಗೆ ಜನರ ಮುಂದೆ ಮಂಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಪುರಸಭೆ ಮುಖ್ಯಾಧಿಕಾರಿಯವರಿಗೆ 16 ಮುಖ್ಯ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿಯ ಸದಸ್ಯರುಗಳಾದ ಅಬ್ದುಲ್ ಶರೀಫ್, ಅಬ್ದುಲ್ ರೆಹಮಾನ್, ವಿವಿಧ ಸಂಘಟನೆಯ ಪ್ರಮುಖರುಗಳಾದ ಹರಿದಾಸ್, ಶಾಜಿ ರಮೇಶ್, ಗಣೇಶ್ ಹಾಜರಿದ್ದರು.