ಕಣಿವೆ , ಏ. 10: ಇಲ್ಲಿನ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ತಾ. 18 ರಂದು ಕುಶಾಲನನಗರದ ಎಪಿಸಿಎಂಎಸ್ ಸುವರ್ಣ ಸಭಾಂಗಣದಲ್ಲಿ ಕೈವಾರ ತಾತಯ್ಯ ಅವರ 300ನೇ ಜಯಂತಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಗೆ ಬೈಲಕೊಪ್ಪದ ಶ್ರೀ ಗಣಪತಿ ದೇವಸ್ಥಾನದಲ್ಲಿ ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬೈಲಕೊಪ್ಪದ ಆರಕ್ಷಕ ಠಾಣೆಯಿಂದ ಅಲಂಕೃತ ಮಂಟಪದಲ್ಲಿ ಆರಂಭವಾಗುವ ಕೈವಾರ ತಾತಯ್ಯ ಅವರ ಭಾವಚಿತ್ರದ ಮೆರವಣಿಗೆ ಕುಶಾಲನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಗಣಪತಿ ದೇವಾಲಯದವರೆಗೂ ಧಾವಿಸಲಿದೆ. ಬಳಿಕ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಧ್ಯಾಹ್ನ 12 ಗಂಟೆಗೆ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಕುಶಾಲನಗರ ತಾಲೂಕು ಯೋಗಿ ನಾರೇಯಣ ಬಲಿಜ ಸಮಾಜದ ಅಧ್ಯಕ್ಷ ಆರ್. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕೈವಾರ ಕ್ಷೇತ್ರದ ಮಂಕಾಲ ಶ್ರೀ ಹರಿಶರ್ಮ ಹಾಗೂ ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಅಧ್ಯಕ್ಷ ಎನ್.ಪಿ. ಮುನಿಕೃಷ್ಣಪ್ಪ ಅವರಿಂದ ಕೈವಾರ ತಾತಯ್ಯ ಅವರ ಕುರಿತು ಪ್ರವಚನ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಬಲಿಜ ಸಮಾಜದ ಗೌರವಾಧ್ಯಕ್ಷ ಆರ್. ಬಾಬಣ್ಣ, ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಶುಭಮರವಂತೆ, ಕೊಡಗು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಗಣೇಶ ನಾಯ್ಡು, ಕುಶಾಲನಗರದ ಅಮರನಾರಾಯಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಸತೀಶ್ ಆಗಮಿಸಲಿದ್ದಾರೆ. 2025ರ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಶೇ. 85ಕ್ಕಿಂತ ಅಧಿಕ ಅಂಕ ಗಳಿಸಿದ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನ ಬಲಿಜ ಸಮಾಜದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಸಾಧಕ ವಿದ್ಯಾರ್ಥಿಗಳ ವಿವರವನ್ನು ಬಲಿಜ ಸಮಾಜದ ಉಪಾಧ್ಯಕ್ಷ ಸಿ. ಮದನ್ ಅವರಲ್ಲಿ 9448648293 ಇಲ್ಲಿ ನೋಂದಾಯಿಸಬೇಕೆಂದು ಬಲಿಜ ಸಮಾಜದ ಅಧ್ಯಕ್ಷ ಆರ್. ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.