ಮಡಿಕೇರಿ, ಏ. 10: ಜೆನ್ ಜೀ ಪೀಳಿಗೆಯನ್ನು ಕೂಡ ಗಮನದಲ್ಲಿರಿಸಿಕೊಂಡು ರೋಟರಿಯಂತಹ ಸೇವಾ ಸಂಸ್ಥೆಗಳು ಯೋಜನೆ ರೂಪಿಸಬೇಕು. ನವಪೀಳಿಗೆಗೆ ಸಾಮಾಜಿಕ ಸೇವೆಯ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ರೋಟರಿ ಜಿಲ್ಲೆ 3181ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಕರೆ ನೀಡಿದರು.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ಸಂಸ್ಥೆ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ರೋಟರಿ ವಿಷನ್ ಬಗ್ಗೆ ಅನಿಲ್ ಮಾತನಾಡಿದರು. ಪ್ರಸ್ತುತ ವಿಶ್ವದಾದ್ಯಂತ 11.25 ಲಕ್ಷ ರೋಟರಿ ಸದಸ್ಯರಿದ್ದು, 2030 ರಲ್ಲಿ ಅಂತರರಾಷ್ಟ್ರೀಯ ರೋಟರಿ ತನ್ನ 125ನೇ ವರ್ಷ ಆಚರಿಸಿಕೊಳ್ಳುವ ಸಂದರ್ಭ 12.50 ಲಕ್ಷ ಸದಸ್ಯರ ಗುರಿಯನ್ನು ರೋಟರಿ ಹೊಂದಿದೆ ಎಂದು ತಿಳಿಸಿದರು.
ರೋಟರಿ ಸೇವಾ ಯೋಜನೆಗಳಲ್ಲಿಯೂ ಮಾರ್ಪಾಡು ಅತ್ಯಗತ್ಯವಾಗಿದ್ದು ಪ್ರತೀ ವರ್ಷವೂ ಒಂದೇ ಯೋಜನೆಗೆ ಜೋತು ಬೀಳದೆ ಜೆನ್ಜೀ ಪೀಳಿಗೆಯನ್ನೂ ಗಮನದಲ್ಲಿರಿಸಿಕೊಂಡು ಸಮಾಜದ ಅತ್ಯಗತ್ಯವನ್ನೂ ತಿಳಿದುಕೊಂಡು ವಿನೂತನ ಯೋಜನೆಗಳನ್ನು ರೂಪಿಸುವತ್ತ ರೋಟರಿ ಪ್ರಮುಖರು ಮುಂದಾಗಬೇಕೆಂದು ಅವರು ಹೇಳಿದರು.
ಯುವ ಪೀಳಿಗೆಯಲ್ಲಿ ಸೇವಾ ಕಾಳಜಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿನ ಇಂಟರ್ಯಾಕ್ಟ್ ಮತ್ತು ಕಾಲೇಜು ಹಂತದಲ್ಲಿನ ರೋಟರ್ಯಾಕ್ಟ್ ಕ್ಲಬ್ಗಳನ್ನು ಮತ್ತಷ್ಟು ಹೆಚ್ಚಿಸಿ ಯುವಕ, ಯುವತಿಯರಿಗೆ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಮೂಡಿಸುವಂತಾಗಬೇಕೆಂದು ಅವರು ಹೇಳಿದರು.
ಭಾರತದಲ್ಲಿ ಪ್ರಸ್ತುತ 4790 ರೋಟರಿ ಕ್ಲಬ್ಗಳಲ್ಲಿ 1.80 ಲಕ್ಷ ಸದಸ್ಯರಿದ್ದಾರೆ. ಕಳೆದೊಂದು ವರ್ಷದÀಲ್ಲಿ 46 ನೂತನ ರೋಟರಿ ಕ್ಲಬ್ಗಳು ಸೇರ್ಪಡೆಯಾಗಿದ್ದು, ವಿಶ್ವದಲ್ಲಿ 572 ಹೊಸ ಕ್ಲಬ್ಗಳು ಪ್ರಾರಂಭವಾಗಿವೆÉ. ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ರೋಟರಿ ಸೇವಾ ಸಂಸ್ಥೆಯನ್ನು ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕವಾಗಿದೆ ಎಂದು ಅನಿಲ್ ಹೇಳಿದರು.
ಬೆಂಗಳೂರಿನ ಉದ್ಯಮಿ ರವಿಶಂಕರ್ ಡಾಕೋಜಿ ಅವರು ರೋಟರಿ ಸಂಸ್ಥೆಗೆ 500 ಕೋಟಿ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದ್ದು ಧನ್ಯವಾದ್ ಹೆಸರಿನಲ್ಲಿ ಸಮಾಜಕ್ಕೆ ಕೃತಜ್ಞತೆ ಸಲ್ಲಿಸುವ ವೈವಿಧ್ಯಮಯ ಕಾರ್ಯಯೋಜನೆಗೆ ಮುಂದಾಗಿದ್ದಾರೆ. ಕೊಡಗಿನಲ್ಲಿಯೂ ಸೂಕ್ತ ಜಾಗ ದೊರೆತಲ್ಲಿ ಧನ್ಯವಾದ್ ಯೋಜನೆ ಮೂಲಕ ಪರಿಸರ, ನೆಲ, ಜಲ ಸಂಬಂಧಿತ ಯೋಜನೆ ಜಾರಿಗೊಳಿಸಲು ಅವಕಾಶವಿದೆ ಎಂದು ಅನಿಲ್ ಮಾಹಿತಿ ನೀಡಿದರು. ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ವಂದಿಸಿದರು. ಮುಂದಿನ ಸಾಲಿನ ಕಾರ್ಯದರ್ಶಿ ಸ್ಮಿತಾ ಚಂಗಪ್ಪ, ನಿಕಟಪೂರ್ವ ಅಧ್ಯಕ್ಷ ಹರೀಶ್ ಕಿಗ್ಗಾಲು, ಮಾಜಿ ಅಧ್ಯಕ್ಷ ವಸಂತ್ ಕುಮಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು.