ಮಡಿಕೇರಿ, ಏ.9: ಅಬ್ಬಿಫಾಲ್ಸ್ ರಸ್ತೆ ಬಳಿ ಕಾಫಿ ತೋಟ ಹೊಂದಿದ್ದ ಕಾಫಿ ಬೆಳೆಗಾರರಾಗಿದ್ದ ಡಾ. ಪ್ರೇಮನಾಥ್ ಪೂಂಜಾ (88)ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ದೈವಭಕ್ತರಾಗಿದ್ದ ಅವರು ನಗರದ ಹಲವು ದೇವಾಲಯಗಳಿಗೆ ಉದಾರ ಧನಸಹಾಯ ನೀಡಿದ್ದರು. ಸರಕಾರಿ ವೈದ್ಯರಾಗಿ ಮಡಿಕೇರಿಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಬ್ರಿಟಿμï ಕಾಲದ ಬಂಗಲೆಯನ್ನು ಹೊಂದಿದ್ದು ಅಲ್ಲಿ ವಾಸಿಸುತ್ತಿದ್ದು ಇತ್ತೀಚೆಗೆ ಅನಾರೋಗ್ಯ ಕಾರಣ ಬೆಂಗಳೂರಿನಲ್ಲಿದ್ದರು. ಪೂಂಜಾ ಅವರು ಗಾಲ್ಫ್ ಮೈದಾನದ ಕೆಲವು ಪ್ರದೇಶದ ವಾರಿಸುದಾರರಾಗಿದ್ದು, ಅದರಲ್ಲಿ ಭಾಗಶಃ ಪ್ರದೇಶವನ್ನು ಗಾಲ್ಫ್ ಆಟಕ್ಕಾಗಿ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರು. ಅವರು ವಾಸಿಸುತ್ತಿದ್ದ ಬಂಗಲೆಯಲ್ಲಿ ರವಿವರ್ಮ ಮೊದಲಾದ ಕಲಾತ್ಮಕ ಚಿತ್ರಗಳು ಆಕರ್ಷಣೀಯವಾಗಿದ್ದು, ಅವುಗಳನ್ನು ಸಂಗ್ರಹಿಸಿಡುವ ಆಸಕ್ತಿ ಹೊಂದಿದ್ದರು. ಮನೆಯ ಸುತ್ತಲೂ ಕಾಫಿ ತೋಟವಿದ್ದು, ಬಂಗಲೆಯಲ್ಲಿ ಬ್ರಿಟಿμï ಕಾಲದ ಬೆಂಕಿಯ ಕುಲುಮೆ, ಬಿಲಿಯಡ್ರ್ಸ್ ಟೇಬಲ್‍ಗಳಿದ್ದು ಈ ಬಂಗಲೆಯ ವೀಕ್ಷಣೆಗೆ ದೇಶ ವಿದೇಶಗಳಿಂದ ಆಸಕ್ತರು ಬರುತ್ತಿದ್ದು, ಸಾಕ್ಷ್ಯಚಿತ್ರ ಚಿತ್ರೀಕರಣವೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಒಳಗಾಗಿತ್ತು. ಈ ಬಂಗಲೆಯಲ್ಲಿ ಖ್ಯಾತ ಚಿತ್ರ ನಟಿ ರೇಖಾ ನಟಿಸಿದ್ದ “ಖೂನ್ ಬರೊ ಮಾಂಗೊ “ ಹಿಂದಿ ಚಿತ್ರ ಚಿತ್ರೀಕರಣಗೊಂಡಿತ್ತು.

ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಅವರು ಪೂಂಜಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮುದಾಯದ ಸಾಧಕರಾಗಿದ್ದ ಅವರು ಬಂಟ ಸಮುದಾಯದ ಬೆಳವಣಿಗೆ ಬಗ್ಗೆ ತಮ್ಮದೇ ಆದ ಕನಸು ಹೊಂದಿದ್ದು ಕೊಡಗಿನ ಬಂಟರ ಹಿತಕ್ಕಾಗಿ ಬಂಟರ ಭವನ ನಿರ್ಮಾಣಕ್ಕೆ ತಮ್ಮ ಬೆಲೆಬಾಳುವ ಜಾಗವನ್ನು ದಾನವಾಗಿ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಮಡಿಕೇರಿಯ ಕೋದಂಡರಾಮ ಟ್ರಸ್ಟ್ ನ ಪದಾಧಿಕಾರಿಗಳು ದಿವಂಗತರು ದೇವಾಲಯಕ್ಕೆ ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಂಡಿದ್ದು, ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.