ಮಡಿಕೇರಿ, ಏ. 9: ಮಡಿಕೇರಿ ನಗರಸಭೆ ಕಚೇರಿ ಪಕ್ಕದಲ್ಲಿರುವ ಕಾವೇರಿ ಕಲಾಕ್ಷೇತ್ರ ಕಟ್ಟಡವನ್ನು ಕೆಡವಿ ಸುಸಜ್ಜಿತ ವಾಹನ ನಿಲುಗಡೆಯ ವ್ಯವಸ್ಥೆಯನ್ನು ಒಳಗೊಂಡ ನೂತನ ಕಲಾಭವನ ನಿರ್ಮಾಣಕ್ಕೆ ಇಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಬಳಿಕ ಏರ್ಪಡಿಸಲಾಗಿದ್ದ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಡಾ. ಮಂತರ್ ಗೌಡ, ನೂತನ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಗುಣಮಟ್ಟದ ವಿಚಾರದಲ್ಲಿ ತಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಹೇಳಿದರು.

ನೂತನ ಕಟ್ಟಡ ನಿರ್ಮಾಣಕ್ಕೆ ರೂ. 9 ಕೋಟಿ 50 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಕಾವೇರಿ ಕಲಾಕ್ಷೇತ್ರದ ಹಳೆಯ ಕಟ್ಟಡ ನಿರ್ಮಾಣದಲ್ಲಿ ಸಾಕಷ್ಟು ಮಂದಿಯ ಶ್ರಮವಿದ್ದು, ಅವರೆಲ್ಲರ ಶ್ರಮವನ್ನು ನಾವು ಮರೆಯುವಂತಿಲ್ಲ. ಪ್ರಸ್ತುತ ಇರುವ ಕಟ್ಟಡ ಬೆರಳೆಣಿಕೆಯ ಕಾರ್ಯಕ್ರಮಗಳಿಗಷ್ಟೇ ಬಳಕೆಯಾಗುತ್ತಿತ್ತು. ಇದೀಗ ಅದರ ಬದಲಿಗೆ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಬಳಕೆಗೆ ಅದನ್ನು ಸಮರ್ಪಿಸಬೇಕಾಗಿದೆ. ಮಡಿಕೇರಿ ನಗರದಲ್ಲಿನ ಪಾರ್ಕಿಂಗ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡು ನೂತನ ಕಲಾಭವನವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಕಾಮಗಾರಿಗೆ ಇನ್ನೂ ಏಳುವರೆ ಕೋಟಿ ಹಣದ ಅವಶ್ಯಕತೆಯಿದ್ದು, ಸರಕಾರದಿಂದ ಈ ಅನುದಾನವನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಮಂತರ್ ಗೌಡ ಭರವಸೆಯಿತ್ತರು. ಶಿಥಿಲಾವಸ್ಥೆಯಲ್ಲಿರುವ ಕಾವೇರಿ ಕಲಾಕ್ಷೇತ್ರದ ಬದಲಿಗೆ ನೂತನ ಕಲಾಭವನ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಂಡಿರುವಂತೆ ನಗರಸಭೆಯ ಕಟ್ಟಡವನ್ನೂ ಕೂಡ ಮುಂದಿನ ದಿನಗಳಲ್ಲಿ ಮೇಲ್ದರ್ಜೆಗೇರಿಸಲು ಚಿಂತಿಸಲಾಗುವುದು ಎಂದರಲ್ಲದೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೂ ಒಂದಾದರೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಶುಚಿತ್ವಕ್ಕೆ ಆದ್ಯತೆ ನೀಡಿ - ಸುಜಾ

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಮಡಿಕೇರಿ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಇಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡ ನೂತನ ಕಲಾಭವನ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಜಿಲ್ಲೆಯ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಸುಜಾ ಕುಶಾಲಪ್ಪ ನೂತನ ಕಟ್ಟಡ ಕಾಮಗಾರಿಯ ಗುಣಮಟ್ಟದ ಬಗ್ಗೆ ನಗರಸಭಾ ಸದಸ್ಯರು ಗಮನಹರಿಸಬೇಕೆಂದು ನುಡಿದರು.

ಅಭಿವೃದ್ಧಿಯಲ್ಲಿ ರಾಜಕೀಯ ಮಾಡಲ್ಲ : ರಂಜನ್

ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನೂತನ ಕಲಾಭವನ ನಿರ್ಮಾಣಕ್ಕೆ ಅಗತ್ಯವಿರುವ ಏಳು ಕೋಟಿ ಅನುದಾನವನ್ನು ಸರಕಾರದಿಂದ ತರುವ ಮೂಲಕ ಸುಸಜ್ಜಿತ ಕಲಾಭವನ ಕಟ್ಟಡ ನಿರ್ಮಾಣವಾಗಲಿ. ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದರು. 4ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸರಕಾರದಿಂದ ಬರುವ ಅನುದಾನಗಳು ಆ ಪಕ್ಷದವರಿಗಿಷ್ಟು, ಈ ಪಕ್ಷದವರಿಗಿಷ್ಟು ಎಂದು ತಾರತಮ್ಯದಿಂದ ಹಂಚಿಕೆ ಆಗಬಾರದು. ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂದು ಸಲಹೆಯಿತ್ತ ಅಪ್ಪಚ್ಚು ರಂಜನ್, ಕೆಲಸ ಮಾಡಿದವರನ್ನು ಸ್ಮರಿಸುವಂತಾಗಬೇಕೆಂದರು.

ಸಿಬ್ಬಂದಿ ಕೊರತೆ : ಯಂಸಿಎನ್

ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಮಾಜಿ ಸಚಿವ ಯಂ.ಸಿ. ನಾಣಯ್ಯ ಮಾತನಾಡಿ, ಮಡಿಕೇರಿ ನಗರಸಭೆಯಲ್ಲಿ ಶೇ 80 ರಷ್ಟು ಹುದ್ದೆ ಖಾಲಿ ಇವೆ. ಹೀಗಿರುವಾಗ ನಗರಸಭೆಯನ್ನು ಮುನ್ನಡೆಸುವುದು ಅಷ್ಟೊಂದು ಸುಲಭವಲ್ಲ. ಆದ್ದರಿಂದ ನಗರಸಭೆಗೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸುವ ಮೂಲಕ ಜನಪರ ಕೆಲಸಗಳು ಉತ್ತಮವಾಗಿ ನಡೆಯುವಂತಾಗಲಿ ಎಂದು ಹೇಳಿದರು.

ಕಾವೇರಿ ಕಲಾಕ್ಷೇತ್ರದ ಕಟ್ಟಡ ನಿರ್ಮಾಣವಾಗುವ ಸಂದರ್ಭ ಕೊಡಗು ರಾಜ್ಯವಾಗಿತ್ತು. ಮಡಿಕೇರಿ ಪುರಸಭೆಯನ್ನು ನಗರಸಭೆಯನ್ನಾಗಿಸಲು ಬೇಕಾದಷ್ಟು ಜನಸಂಖ್ಯೆ ಇಲ್ಲದಿದ್ದರೂ ನಗರಸಭೆಯನ್ನಾಗಿ ಮಾಡಲು ಶ್ರಮಿಸಿದ್ದೆ. ಇದರಿಂದಾಗಿ ಸರಕಾರದಿಂದ ಹೆಚ್ಚಿನ ಅನುದಾನಗಳು ದೊರೆಯಲು ಸಾಧ್ಯವಾಯಿತು ಎಂದು ಯಂಸಿಎನ್ ನುಡಿದರು.

ಮಡಿಕೇರಿ ಸ್ವಚ್ಛವಾಗಿರಲಿ : ಧರ್ಮಜ

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಮಡಿಕೇರಿ ನಗರ ಸ್ವಚ್ಛವಾಗಿರಬೇಕು. ಮಡಿಕೇರಿ ನಗರವನ್ನು ಸ್ವಚ್ಛವಾಗಿಡಲು ನಗರಸಭೆ ಒತ್ತುನೀಡಬೇಕೆಂದರು. ಹಿಂದಿನ ಶಾಸಕರಾದ ಅಪ್ಪಚ್ಚು ರಂಜನ್ ಅವರು ಉತ್ತಮ ಕೆಲಸಗಳನ್ನು ಮಾಡಿದ್ದರು. ಇದೀಗ ಹಾಲಿ ಶಾಸಕ ಮಂತರ್ ಗೌಡ ಅವರೂ ಕೂಡ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದರು.

ಕಲಾವಿದರಿಗೆ ಉತ್ತಮ ವೇದಿಕೆ : ಮಹೇಶ್ ಜೈನಿ

ಪ್ರಸ್ತುತ ಇರುವ ಕಾವೇರಿ ಕಲಾಕ್ಷೇತ್ರ ಹಲವಾರು ಕಲಾವಿದರನ್ನು ಈ ನಾಡಿಗೆ ನೀಡಿದೆ. ಇದೀಗ ಹೊಸದಾಗಿ ನಿರ್ಮಾಣವಾಗುವ ಕಲಾಭವನ ಕೂಡ ಕಲಾವಿದರಿಗೆ ಉತ್ತಮ ವೇದಿಕೆ ಆಗಲಿದೆ ಎಂದು ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಹೇಳಿದರು.

ಭವ್ಯ ಕಾರ್ಯಾಲಯವಾಗಬೇಕು : ಅಮೀನ್

ನಗರಸಭಾ ವಿರೋಧ ಪಕ್ಷದ ನಾಯಕ ಅಮೀನ್ ಮೊಯ್ಸಿನ್ ಮಾತನಾಡಿ, ಮಡಿಕೇರಿ ನಗರಸಭೆಗೂ ಒಂದು ಭವ್ಯ ಕಾರ್ಯಾಲಯದ ಅಗತ್ಯವಿದೆ ಎಂದರಲ್ಲದೆ ಮಡಿಕೇರಿ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಲು ಶಾಸಕರು ಪ್ರಯತ್ನಿಸಬೇಕು ಎಂದರು.

ಹಾಲಿ ಹಾಗೂ ಮಾಜಿ ಶಾಸಕರುಗಳ ಪ್ರಯತ್ನ ಹಾಗೂ ಎರಡು ಅವಧಿಯ ನಗರಸಭೆ ಸದಸ್ಯರ ಹೋರಾಟದಿಂದ ನೂತನ ಕಲಾಭವನ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ ಎಂದರು.

ನಗರಸಭಾ ಆಯುಕ್ತ ಹೆಚ್.ಆರ್. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರವಂಡ ಕುಟುಂಬಸ್ಥರು ಉದಾರವಾಗಿ ನೀಡಿದ ಜಾಗದಲ್ಲಿ ನಿರ್ಮಾಣವಾದ ಕಾವೇರಿ ಕಲಾಕ್ಷೇತ್ರ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ನೂತನ ಕಟ್ಟಡಕ್ಕೆ ಭೂಮಿಪೂಜೆ ನಡೆದಿದೆ ಎಂದು ಹೇಳಿದರು. ನೂತನ ಕಟ್ಟಡದಲ್ಲಿ ಎರಡು ತಳಮಹಡಿಯನ್ನು ಪಾರ್ಕಿಂಗ್‍ಗೆ ಕಾಯ್ದಿರಿಸಿ 2 ತಳಮಹಡಿಯಲ್ಲಿ ಒಟ್ಟಾಗಿ ಸುಮಾರು 200 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ನೆಲಮಹಡಿಯಲ್ಲಿ ಕಚೇರಿ ಕಟ್ಟಡ, ವಾಣಿಜ್ಯ ಮಳಿಗೆಗಳು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಮೊದಲ ಮಹಡಿಯಲ್ಲಿ ಸುಮಾರು 450 ಜನರಿಗೆ ಆಸನಗಳ ವ್ಯವಸ್ಥೆ ಜೊತೆ ವಿಶಾಲವಾದ ವೇದಿಕೆ, ಗ್ರೀನ್ ರೂಮ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಯಂ.ಸಿ. ನಾಣಯ್ಯ, ಅಪ್ಪಚ್ಚು ರಂಜನ್, ಮಂತರ್ ಗೌಡ, ಸುಜಾ ಕುಶಾಲಪ್ಪ, ಧರ್ಮಜ ಉತ್ತಪ್ಪ, ನಗರಸಭಾ ಅಧ್ಯಕ್ಷೆ ಕಲಾವತಿ, ಮಹೇಶ್ ಜೈನಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಇವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅರುಣ್ ಶೆಟ್ಟಿ, ಅಪ್ಪಣ್ಣ, ಸತೀಶ್, ಶಾರದಾ ನಾಗರಾಜ್, ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ದಾಸ್ ಮತ್ತಿತರರಿದ್ದರು.

ನೂತನ ಕಟ್ಟಡಕ್ಕೆ ಭೂಮಿಪೂಜೆ ಸಂದರ್ಭ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಕಾಳಪ್ಪ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಜಿ.ಪಂ. ಮಾಜಿ ಅಧ್ಯಕ್ಷರಾದ ರವಿಕುಶಾಲಪ್ಪ, ಚಂದ್ರಕಲಾ, ಕೊಡವ ಸಮಾಜದ ಅಧ್ಯಕ್ಷ ಎಂ.ಪಿ. ಮುತ್ತಪ್ಪ, ಸವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ವಕೀಲ ಎಂ.ಎ. ನಿರಂಜನ್, ನಗರಸಭೆ ಮಾಜಿ ಅಧ್ಯಕ್ಷ ನಂದಕುಮಾರ್, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಪದ್ಮಶ್ರೀ ರಾಣಿ ಮಾಚಯ್ಯ, ನಗರಸಭಾ ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಪಕ್ಷಗಳ, ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಹಾಲಿ, ಮಾಜಿ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಜರಿದ್ದರು. ಸ್ವಾತಿ ಮತ್ತು ತಂಡ ಪ್ರಾರ್ಥಿಸಿ, ವಿನೋದ್ ಮೂಡಗದ್ದೆ ನಿರೂಪಿಸಿದರು. ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಸ್ವಾಗತಿಸಿ, ರೇವತಿ ರಮೇಶ್, ಸುಶೀಲ ವಾಸುದೇವ್, ಪ್ರೇಮಾ ರಾಘವಯ್ಯ ನಾಡಗೀತೆ ಹಾಡಿದರು. ನಗರಸಭೆ ಕಂದಾಯಾಧಿಕಾರಿ ತಾಹಿರ್ ವಂದಿಸಿದರು.