ಮಡಿಕೇರಿ, ಏ. 9: ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟಗಳಲ್ಲಿ ಒಂದಾದ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ 92 ಫಲಿತಾಂಶದೊಂದಿಗೆ ಕೊಡಗು ಜಿಲ್ಲೆ ರಾಜ್ಯಕ್ಕೆ 3ನೇ ಸ್ಥಾನ ಪಡೆದು ಅಮೋಘ ಸಾಧನೆ ಮಾಡಿದೆ. ಕಳೆದ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದ ಕೊಡಗು ಈ ಸಾಲಿನಲ್ಲಿ 3ನೇ ಸ್ಥಾನಕ್ಕೆ ಏರಿರುವುದು ಗಮನಾರ್ಹವಾಗಿದೆ. ಫೆ. 28 ರಿಂದ ಮಾರ್ಚ್ 17ರ ತನಕ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದರು. ಕೊಡಗು ಜಿಲ್ಲೆಯಲ್ಲಿ ಒಟ್ಟು 4745 ವಿದ್ಯಾರ್ಥಿಗಳ ಪೈಕಿ 1898 ಬಾಲಕರು, 2847 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇದರಲ್ಲಿ 4380 ಮಂದಿ ತೇರ್ಗಡೆ ಹೊಂದಿದ್ದಾರೆ. ತೇರ್ಗಡೆಯಾದವರಲ್ಲಿ 1752 ಬಾಲಕರು, 2628 ಬಾಲಕಿಯರು ತೇರ್ಗಡೆಯಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ತಲಾ ಒಬ್ಬರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ವಿಜ್ಞಾನದಲ್ಲಿ ಇಬ್ಬರು ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

ಅಭಿನಂದನೆ ಸಲ್ಲಿಸಿದ ಡಿಸಿ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದ ಹಿನ್ನೆಲೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನು ಅಭಿನಂದಿಸಿದರು.

ತಮ್ಮ ಕಚೇರಿಯಲ್ಲಿ ಅಧಿಕಾರಿಗಳನ್ನು ಬರಮಾಡಿಕೊಂಡು ಅಭಿನಂದಿಸಿ ಜಿಲ್ಲಾಧಿಕಾರಿ ಫಲಿತಾಂಶ ಕುರಿತು ಚರ್ಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿಜಯ್, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿವಾಕರ, ಭೂ ದಾಖಲೆಗಳ ಉಪ ನಿರ್ದೇಶಕರು, ತಹಶೀಲ್ದಾರರು ಇತರರು ಈ ಸಂದರ್ಭದಲ್ಲಿ ಇದ್ದರು.

ಜಿಲ್ಲೆಗೆ ಮೊದಲ ರ್ಯಾಂಕ್ ಪಡೆದವರು

ವಾಣಿಜ್ಯ ವಿಭಾಗದಲ್ಲಿ ಸಂತ ಮೈಕಲರ ಶಾಲೆಯ ವಿದ್ಯಾರ್ಥಿನಿ, ಮಡಿಕೇರಿ ನಿವಾಸಿ ಹೊಸಮನೆ ಪ್ರಸನ್ನ ಕುಮಾರ್, ರೀನಾ ದಂಪತಿಯ ಪುತ್ರಿ ಸಿಂಚನ ಪ್ರಸನ್ನ 597 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪೊನ್ನಂಪೇಟೆ ಹಳ್ಳಿಗಟ್ಟು ಸಿಐಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ಡಿ. ಭಾಷಿತ 594 ಅಂಕದೊಂದಿಗೆ ಜಿಲ್ಲೆಗೆ ಮೊದಲ ರ್ಯಾಂಕ್, ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದಾರೆ. ಭಾಷಿತ ಕೋಟೂರು ಗ್ರಾಮದ ಕಾಟಿಮಾಡ ಎ ದೇವಯ್ಯ ಹಾಗೂ ಕಾವೇರಮ್ಮ ದಂಪತಿಯ ಪುತ್ರಿ. ಕಲಾ ವಿಭಾಗದಲ್ಲಿ ಶನಿವಾರಸಂತೆ ಭಾರತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ, ಶನಿವಾರಸಂತೆ ನಿವಾಸಿ ಅಬುಬಕ್ಕರ್ ಹಾಗೂ ರಹೀಮತ್ ದಂಪತಿ ಪುತ್ರಿ ಎಸ್.ಎ. ಫಾತೀಮಾ 592 ಅಂಕದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ತೋರಿದ್ದಾರೆ.ರಾಜ್ಯಕ್ಕೆ ಯಾನ ನಾಲ್ಕನೇ ಸ್ಥಾನ

ಮೂಲತಃ ಹೊದ್ದೂರು ಗ್ರಾಮದ ನೆರವಂಡ ಸಂಜಯ್ ಪೂಣಚ್ಚ ಹಾಗೂ ಮೋನಿತ ದಂಪತಿ ಪುತ್ರಿ, ಬೆಳ್ತಂಗಡಿ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ನೆರವಂಡ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ 597 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗ

ಕಲಾ ವಿಭಾ ಗದಲ್ಲಿ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ತೊರೆನೂರು ಸಮೀ ಪದ ಅರೆಗಲು ನಿವಾಸಿ ಟಿ.ಎನ್. ಗಿರೀಶ್, ಪವಿತ್ರ ದಂಪತಿ ಪುತ್ರಿ ನಂದಿತಾ 584 ಅಂಕದೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೂರ್ನಾಡು ಪಿಯು ಕಾಲೇಜಿನ ವಿದ್ಯಾರ್ಥಿನಿ, ಐಕೊಳ ಗ್ರಾಮದ ಮುಸ್ತಫಾ, ಸುಬೈದಾ ದಂಪತಿ ಪುತ್ರಿ ಕೆ.ಎಂ. ಜುಹಾರ 570 ಅಂಕದೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ

ವಾಣಿಜ್ಯ ವಿಭಾಗದಲ್ಲಿ ಕುಶಾಲನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ, ಬೈಚನಹಳ್ಳಿಯ ರಜಾಕ್ ಹಾಗೂ ರಮ್ಲತ್ ದಂಪತಿ ಪುತ್ರಿ 590 ಅಂಕದೊಂದಿಗೆ ರಿಲಾ ಸಾರಮ್ಮ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಕುಶಾಲನಗರ ಶೈಲಜಾ ಬಡಾವಣೆ ನಿವಾಸಿ ವಿನೋದ್ ಕುಮಾರ್, ಅನಿತಾ ದಂಪತಿ ಪುತ್ರಿ ವಿ. ಕೀರ್ತನ, ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಕುಂಜಿಲ ಗ್ರಾಮದ ಶಾಹುಲ್ ಹಮೀದ್, ಸುಬೈದ ದಂಪತಿ ಪುತ್ರಿ ಎಂ.ಎಸ್. ಫರೀದ ಅವರುಗಳು ತಲಾ 588 ಅಂಕದೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗ

ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ವೀರಾಜಪೇಟೆಯ ಎ. ಮನೋಹರನ್ ಹಾಗೂ ಟಿ.ಎಂ ಶ್ರೀದೇವಿ ದಂಪತಿ ಪುತ್ರ ಎಂ. ಹರಿಕೃಷ್ಣನ್ ಹಾಗೂ ಪೆÇನ್ನಂಪೇಟೆಯ ಬಿ. ಎ.ಚಂಗಪ್ಪ ಹಾಗೂ ಬಿ. ಸಿ. ದೇವಕಿ ದಂಪತಿ ಪುತ್ರ ಬಿ.ಸಿ. ವಿಪುಲ್ ಉತ್ತಪ್ಪ ತಲಾ 591 ಅಂಕದೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕುಶಾಲನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಸುಂಟಿಕೊಪ್ಪ ನಿವಾಸಿ ವಿ.ಜಿ. ಲೋಕೇಶ್, ಎಂ.ಎ. ಶೋಭಾ ದಂಪತಿ ಪುತ್ರಿ ಕೆ.ಎಲ್. ಗ್ರೀಷ್ಮಾ 590 ಅಂಕದೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.