ನಾಪೆÇೀಕ್ಲು, ಏ. 9: ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ವಿಶ್ವ ಆರೋಗ್ಯ ದಿನವನ್ನು ಸಮಾಜದ ಸಭಾಂಗಣದಲ್ಲಿ ಆಚರಿಸಲಾಯಿತು.

ನಿವೃತ್ತ ಪ್ರಭಾರ ಶುಶ್ರೂಷಕ ಅಧೀಕ್ಷಕಿ ತಳೂರು ದೇವಕಿ ಪೂಣಚ್ಚ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ 1948 ಏಪ್ರಿಲ್ 7 ರಂದು ಜಾಗತಿಕ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಸರ್ವರಿಗೂ ಸಮಾನ ಆರೋಗ್ಯ ರಕ್ಷಣೆ ಸಿಗಬೇಕೆಂಬ ಧ್ಯೇಯವಾಕ್ಯದೊಂದಿಗೆ ಆರೋಗ್ಯ ದಿನವನ್ನು ಆಚರಿಸಲು ಆರಂಭಿಸಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ವರ್ಷದ ಪ್ರತಿಯೊಂದು ದಿನವು ವಿಶೇಷ ದಿನವಾಗಿದ್ದು, ಅದರಲ್ಲೂ ಆರೋಗ್ಯ ದಿನ ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದ ದಿನವಾಗಿದೆ, ಆರೋಗ್ಯವಿದ್ದರೆ ಸರ್ವ ಭಾಗ್ಯಗಳು ಸಿದ್ಧಿಸುತ್ತವೆ. ಒಕ್ಕೂಟದಿಂದ ಇಂತಹ ಹಲವಾರು ವಿಶೇಷ ದಿನಾಚರಣೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಒಕ್ಕೂಟದ ಸದಸ್ಯರು ಹಾಗೂ ಇತರರಿಗೆ ಮಾಹಿತಿ ಹಾಗೂ ಪ್ರಯೋಜನ ದೊರಕುವುದು ಅಲ್ಲದೆ ಹಲವಾರು ಪ್ರತಿಭೆಗಳಿಗೆ ಹಾಗೂ ಸಾಧಕರಿಗೆ ವೇದಿಕೆ ನೀಡುವುದು ಅವರನ್ನು ಗುರುತಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಪೌಷ್ಟಿಕಾಂಶಯುಕ್ತ ಆಹಾರ ಪ್ರದರ್ಶನವನ್ನು ಉದ್ಘಾಟಿಸಿದ ಚೇರಂಬಾಣೆ ಸಮೃದ್ಧಿ ಆಸ್ಪತ್ರೆಯ ಸ್ಥಾಪಕಿ ಹೇಮಲತಾ ಮಾತನಾಡಿ, ಇತ್ತೀಚೆಗೆ ಜನರು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಹಾಗೂ ಕುರುಕಲು ತಿಂಡಿಗಳ ಮೊರೆ ಹೋಗಿ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ. ಪೌಷ್ಟಿಕಾಂಶ ಉಳ್ಳ ಆಹಾರ ಪದಾರ್ಥಗಳು, ಸೊಪ್ಪುಮ ತರಕಾರಿಗಳು, ಹಣ್ಣು ಹಂಪಲುಗಳ ಸೇವನೆ, ನಿಗದಿತ ವ್ಯಾಯಾಮ, ನಡಿಗೆಯಿಂದ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳಬಹುದು ಎಂದು ಕರೆ ನೀಡಿದರು.

ಬೆಟ್ಟಗೇರಿಯ ಪ್ರಾಥಮಿಕ ಆರೋಗ್ಯ ಅಧಿಕಾರಿ ಕೃತಿಕಾ ರಾಣಿ ವಿಶ್ವ ಆರೋಗ್ಯ ದಿನದ ಬಗ್ಗೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸುರಕ್ಷಿತ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಇದರ ಪ್ರಯೋಜನಾ ಪಡೆದುಕೊಳ್ಳಬೇಕು ಎಂದರು.

ಆಶಾ ಕಾರ್ಯಕರ್ತೆ ಕೇಚಪ್ಪನ ಗೀತಾ, ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಮತ್ತು ಆರೈಕೆಯ ಬಗ್ಗೆ ಮಾಹಿತಿ ಒದಗಿಸಿದರು.

ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ಪಾರೆಮಜಲು ವಿಮಲಾ ತಮ್ಮಯ್ಯ, ಆಶಾ ಕಾರ್ಯಕರ್ತೆಯರಾದ ಜಯ ಚಿತ್ರ, ಉμÁ, ಒಕ್ಕೂಟದ ಉಪಾಧ್ಯಕ್ಷರಾದ ಹೊಸೋಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲಾ ಅಪ್ಪಾಜಿ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ಸೇರಿದಂತೆ ಸಮಿತಿ ಸದಸ್ಯರು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿ, ಬೈಮನ ಜ್ಯೋತಿ ತಿಮ್ಮಯ್ಯ ಸ್ವಾಗತಿಸಿದರು. ಕೂಡಕಂಡಿ ಸೋನಿ ಸುದೀಪ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ವಂದಿಸಿದರು.