ಸೋಮವಾರಪೇಟೆ, ಏ. 9: ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ತಪೆÇೀಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಲೇಖಕಿ ಹಾಗೂ ಕವಯತ್ರಿ ಎನ್.ಎಂ. ಗೀತಾಂಜಲಿ ಮಹೇಶ್ ಅವರು ರಚಿಸಿರುವ ಮೂರು ಕೃತಿಗಳು ಲೋಕಾರ್ಪಣೆಗೊಂಡವು.
ಮಾನಿನಿಯ ಮಾರ್ದನಿ, ಜ್ಞಾನ ಮಂಥನ ಹಾಗೂ ನಿನಾದ ಕೃತಿಗಳನ್ನು ಪ್ರಮುಖರು ಬಿಡುಗಡೆಗೊಳಿಸಿದರು. ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ‘ಮಾನಿನಿಯ ಮಾರ್ದನಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಮಾನವನು ಸೃಷ್ಟಿಯ ಅದ್ಬುತ ಸಂಕೇತ. ಜೀವಶಕ್ತಿ, ಪ್ರಜ್ಞೆ ಮತ್ತು ಅರಿವನ್ನು ಹೊಂದಿರುವ ಮನುಷ್ಯ, ಸೃಷ್ಟಿಕರ್ತನೊಂದಿಗೆ ದೈವಿಕ ಪ್ರೇರಣೆಯಾದಾಗ ತನ್ನಲ್ಲಿ ಅಡಕವಾಗಿರುವ ಕಲಾ ಚೈತನ್ಯ ಜಾಗೃತಗೊಳ್ಳುತ್ತದೆ ಎಂದರು. ‘ನಿನಾದ’ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಿದ ಕೋಲಾರ ಜಿಲ್ಲಾ ನ್ಯಾಯಾಧೀಶರಾದ ಜಯಶ್ರೀ ಮಾತನಾಡಿ, ಸಮಾಜದಲ್ಲಿ ಬರಹಗಾರರು ಹೆಚ್ಚಾಗಬೇಕು. ಮಹಿಳೆಯರು ಹಿಂದೆ ಅಡುಗೆ ಮನೆಗೆ ಸೀಮಿತ ಎನ್ನುವಂತಿದ್ದರು. ಆದರೆ ಇಂದು ಎಲ್ಲಾ ರಂಗಗಳಲ್ಲಿಯೂ ಮುಂದೆ ಇದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಅಭಿಪ್ರಾಯಿಸಿದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು ‘ಜ್ಞಾನ ಮಂಥನ’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಬರವಣಿಗೆ ಸುಲಭದ ಕೆಲಸವಲ್ಲ; ಭಾμÉ, ಪದ ಬಳಕೆಯ ಮೇಲೆ ಹಿಡಿತವಿದ್ದರೆ ಮಾತ್ರ ಸಾಹಿತ್ಯಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಗೀತಾಂಜಲಿಯವರ ಪ್ರಯತ್ನ ಶ್ಲಾಘನೀಯವೆಂದರು. ಹಿರಿಯ ಸಾಹಿತಿ ಬೆಸೂರು ಮೋಹನ್ ಪಾಳೇಗಾರ್ ಕೃತಿಗಳ ವಿಮರ್ಶೆ ಮಾಡಿದರು. ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ಲೇಖಕಿಯ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಗೀತಾಂಜಲಿ ಮಹೇಶ್ ದಂಪತಿಗಳನ್ನು ಸನ್ಮಾನಿಸಲಾಯಿತು. ಅರಮೇರಿ ಕಳಂಚೇರಿ ಮಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲ್ಲುಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠಾಧ್ಯಕ್ಷರಾದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕೊಡಗು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್, ಉದ್ಯಮಿ ಸುರೇಶ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕನ್ನಡ ಸಿರಿ ಬಳಗದ ತಾಲೂಕು ಅಧ್ಯಕ್ಷ ಜವರಪ್ಪ, ಪ್ರಮುಖರಾದ ಬಸವರಾಜು, ನಾರಾಯಣ್, ಪವನ ಪಾಲಾಕ್ಷ, ಮಂಜುನಾಥ್, ಅಶ್ವತ್ ಕುಮಾರ್, ಲೇಖಕಿಯ ಪೋಷಕರಾದ ಮಲ್ಲೇಶ್, ಪಾರ್ವತಿ ಸೇರಿದಂತೆ ಇತರರು ಇದ್ದರು.