ಮಡಿಕೇರಿ, ಏ. 8: 1952 ರಲ್ಲಿ ದಕ್ಷಿಣ ಕೊಡಗಿನ ಶ್ರೀಮಂಗಲ ವಿಭಾಗದ ವಿದ್ಯಾಭಿಮಾನಿಗಳ ಪರಿಶ್ರಮದೊಂದಿಗೆ ಪ್ರಾರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದಿಗೆ ಅವರ ಭವಿಷ್ಯಕ್ಕೆ ಅಡಿಪಾಯ ಹಾಕಿಕೊಟ್ಟಿದ್ದ ಶ್ರೀಮಂಗಲ ವಿದ್ಯಾಸಂಸ್ಥೆ ಪ್ರಸ್ತುತ ಹಲವು ರೀತಿಯ ಸಂಕಷ್ಟವನ್ನು ಎದುರಿಸುತ್ತಿವೆ.

ವಿದ್ಯಾರ್ಥಿಗಳ ಕೊರತೆ, ಅನುದಾನಿತ ಕಾಲೇಜು ಆಗಿದ್ದರೂ ಹಣಕಾಸಿನ ಮುಗ್ಗಟ್ಟು, ಉಪನ್ಯಾಸಕರು, ಸಿಬ್ಬಂದಿಗಳಿಗೆ ವೇತನ ಪಾವತಿಸಲು ಆಡಳಿತ ಮಂಡಳಿ ಎದುರಿಸುತ್ತಿರುವ ಸಂಕಷ್ಟ... ಇತ್ಯಾದಿ ಕಾರಣಗಳನ್ನು ಪರಿಗಣಿಸಿ ಈ ವಿದ್ಯಾಸಂಸ್ಥೆಯನ್ನು ಇದೀಗ ಬೆಂಗಳೂರು ಕೊಡವ ಸಮಾಜಕ್ಕೆ ವಹಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಬಗ್ಗೆ ಹಾಲಿ ಆಡಳಿತ ಮಂಡಳಿ, ಹಳೆ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಹಾಗೂ ಬೆಂಗಳೂರು ಕೊಡವ ಸಮಾಜದ ಪ್ರಮುಖರನ್ನು ಒಳಗೊಂಡ ಜಂಟಿ ಸಭೆ ನಿನ್ನೆ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು, ಈ ಸಭೆಯಲ್ಲಿ ಹಸ್ತಾಂತರದ ವಿಚಾರ ಬಹುತೇಕ ಎಲ್ಲರ ಒಪ್ಪಿಗೆಯಂತೆ ನಿರ್ಧಾರವಾಗಿದೆ. ಬೆಂಗಳೂರು ಸಮಾಜದ ಪ್ರಮುಖರು ವಿದ್ಯಾಸಂಸ್ಥೆಯನ್ನು ವಹಿಸಿಕೊಳ್ಳಲು ಒಪ್ಪಿಗೆ ನೀಡಿದೆ. ಸದ್ಯದಲ್ಲೇ ಈ ಬಗ್ಗೆ ಬೆಂಗಳೂರು ಕೊಡವ ಸಮಾಜದ ವಿಶೇಷ ಮಹಾಸಭೆ ಕರೆದು ಈ ಬಗ್ಗೆ ರೂಪು-ರೇಷೆ ಹಮ್ಮಿಕೊಳ್ಳುವ ತೀರ್ಮಾನವನ್ನು ಪ್ರಕಟಿಸಲಾಗಿದೆ.

ಹಾಲಿ ಆಡಳಿತ ಮಂಡಳಿ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಹಾಗೂ ಪದಾಧಿಕಾರಿಗಳು, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಹಾಗೂ ಪದಾಧಿಕಾರಿಗಳು ಸೇರಿದಂತೆ ನಾಡಿನ ಪ್ರಮುಖರು, ಹಳೆ ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಕಲೆ, ವಾಣಿಜ್ಯ ಹಾಗೂ ಕಂಪ್ಯೂಟರ್ ಸೈನ್ಸ್ ಅನ್ನು ಈ ವಿದ್ಯಾಸಂಸ್ಥೆ ಹೊಂದಿದೆ. ಆದರೆ ಈಗಿನ ಸನ್ನಿವೇಶದಲ್ಲಿ ವಿದ್ಯಾಸಂಸ್ಥೆಯನ್ನು ನಡೆಸಿಕೊಂಡು ಹೋಗಲು ಹಲವು ರೀತಿಯ ಸಂಕಷ್ಟ ಎದುರಾಗಿರುವ ಬಗ್ಗೆ ಪ್ರಮುಖರು ಕೂಲಂಕಶವಾಗಿ ವಿವರಣೆಯಿತ್ತರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಒಮ್ಮತದೊಂದಿಗೆ ಇದನ್ನು ಬೆಂಗಳೂರು ಸಮಾಜಕ್ಕೆ ವಹಿಸಲು ತೀರ್ಮಾನಿಸಲಾಯಿತು.

ಸೂಕ್ತ ಮಾಸ್ಟರ್ ಪ್ಲ್ಯಾನ್

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು, ಸದ್ಯದಲ್ಲಿ ಈ ಬಗ್ಗೆ ಸಮಾಜದ ವಿಶೇಷ ಮಹಾಸಭೆ ಕರೆಯಲಾಗುವುದು. ಸಂಸ್ಥೆ ವಹಿಸಿಕೊಂಡ ಬಳಿಕ ಭವಿಷ್ಯದಲ್ಲಿ ಶಿಕ್ಷಣಕ್ಕೆ ಪೂರಕವಾಗಿಯೇ ಮುಂದಿನ ದಿನಗಳ ದೂರದೃಷ್ಟಿಯ ಯೋಜನೆಯಂತೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುವುದು.

ವಸತಿ ಶಾಲೆಯಾಗಿ ಪರಿವರ್ತನೆ, ಮಿನಿ ಹಾಕಿ ಟರ್ಫ್ ಮೈದಾನ ನಿರ್ಮಾಣ ಮಾಡಿ ಕೊಡಗಿನ ಕ್ರೀಡಾಪಟುಗಳಿಗೆ, ಕ್ರೀಡೆಗೆ ಪೂರಕವಾದ ಯೋಜನೆ ಹಮ್ಮಿಕೊಳ್ಳುವ ಚಿಂತನೆ ಇರುವುದಾಗಿ ತಿಳಿಸಿದರು. ಈಗ ಇರುವ ಸಿಬ್ಬಂದಿಗಳಿಗೆ ತೊಂದರೆಯಾಗದಂತೆ ಕಾಳಜಿ ವಹಿಸುವಂತೆ ಪ್ರಾಂಶುಪಾಲರಾದ ಮುಲ್ಲೇಂಗಡ ಸೋಮಯ್ಯ ಮನವಿ ಮಾಡಿದರು. ಈ ಪ್ರಸ್ತಾಪಕ್ಕೆ ಸುರೇಶ್ ನಂಜಪ್ಪ ಅವರು ಒಪ್ಪಿಗೆ ಸೂಚಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ರವಿ ಸುಬ್ಬಯ್ಯ, ನಿರ್ದೇಶಕರಾದ ಕಂಬ ಕಾರ್ಯಪ್ಪ, ಮಾಜಿ ಅಧ್ಯಕ್ಷ ಮದ್ರಿರ ವಿಷ್ಣು, ಕಾಳಿಮಾಡ ಶಿವಪ್ಪ, ಮಚ್ಚಮಾಡ ಡಾಲಿ ಚಂಗಪ್ಪ, ಕಟ್ಟೇರ ಜಾಜಿ ಉತ್ತಪ್ಪ, ಚೊಟ್ಟೆಯಂಡಮಾಡ ವಿಶ್ವನಾಥ್, ಮಾಣಿರ ಉಮೇಶ್ ಸಾಧಕ-ಬಾಧಕಗಳ ಕುರಿತಾಗಿ ಅನಿಸಿಕೆ ವ್ಯಕ್ತಪಡಿಸಿದರು.

ಬೆಂಗಳೂರು ಕೊಡವ ಸಮಾಜದ ಕಾರ್ಯದರ್ಶಿ ಬೇರೆರ ಮಧು ಅಯ್ಯಣ್ಣ, ಖಜಾಂಚಿ ಚೇಮಿರ ಪೊನ್ನಪ್ಪ, ಸಹಕಾರ್ಯದರ್ಶಿ ಮಲ್ಲೇಂಗಡ, ಮುತ್ತಣ್ಣ, ಮಂಡೇಟಿರ ಸುನಿಲ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.