ಕೂಡಿಗೆ, ಏ. 8: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನೂರಾರು ರೈತರು ಈ ಸಾಲಿನಲ್ಲಿ ನವೆಂಬರ್ ತಿಂಗಳ ನಂತರ ತಮ್ಮ ಜಮೀನಿನಲ್ಲಿ ಆರೆ ಬೇಸಾಯವಾಗಿ ಮೆಕ್ಕೆಜೋಳದ ಬೆಳೆಯನ್ನು ಬೆಳೆದಿದ್ದು, ಈಗಾಗಲೇ ಕಟಾವು ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅನೇಕ ರೈತರು ಕಟಾವು ಮಾಡಿ ಜೋಳದ ಕಾಳುಗಳನ್ನು ಬೇರೆ ಮಾಡಿ ಮಾರಾಟ ಮಾಡುವಲ್ಲಿ ತೊಡಗಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು ಹೆಬ್ಬಾಲೆ, ತೊರೆನೂರು, ಶಿರಂಗಾಲ, ಅಳುವಾರ ಸೀಗೆಹೊಸೂರು, ಮದಲಾಪುರ, ಭುವನಗಿರಿ, ಹುದುಗೂರು ವ್ಯಾಪ್ತಿಯ ಅನೇಕ ಉಪ ಗ್ರಾಮಗಳಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಮೆಕ್ಕೆಜೋಳದ ಬೆಳೆಯನ್ನು ರೈತರು ಬೆಳೆದಿದ್ದಾರೆ.

ಹೈನುಗಾರಿಕೆಗೆ ಪ್ರಮುಖವಾಗಿ ಮೆಕ್ಕೆಜೋಳ ಬೆಳೆ ಭಾರಿ ಉಪಯುಕ್ತವಾಗುತ್ತಿದೆ. ಮೆಕ್ಕೆಜೋಳದ ಸಿಪ್ಪೆ ಮತ್ತು ಅದರ ಜೋಳವನ್ನು ಪುಡಿ ಮಾಡಿ ಹಸುಗಳಿಗೆ ಮುಖ್ಯ ಆಹಾರವಾಗಿ ನೀಡಲಾಗುತ್ತಿದೆ.

ಆರೆ ಬೇಸಾಯವಾಗಿ ಬೆಳೆದಿರುವ ಮೆಕ್ಕೆಜೋಳದ ಬೆಳೆಯನ್ನು ಕಟಾವು ಮಾಡಿ ಜೋಳ ಬಿಡಿಸುವ ಯಂತ್ರದ ಮೂಲಕ ಜೋಳದ ಕಾಳುಗಳನ್ನು ಬಿಡಿಸಿ ಮಾರಾಟ ಮಾಡುವಲ್ಲಿ ರೈತರು ತೊಡಗಿದ್ದರೂ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಕಳೆದ ಸಾಲಿನಲ್ಲಿ ಮುಂಗಾರು ಮಳೆಯನ್ನು ಅವಲಂಬಿಸಿ ಮೆಕ್ಕೆಜೋಳ ಬೆಳೆದ ಸಂದರ್ಭ ಮೆಕ್ಕೆಜೋಳದ ಬೆಲೆಯು ಒಂದು ಕ್ವಿಂಟಾಲ್‍ಗೆ ರೂ. 2.300 ಇತ್ತು. ಒಂದು ಕ್ವಿಂಟಾಲ್‍ಗೆ ರೂ. 1400 ಗಳಾಗಿದ್ದು ರೈತರಲ್ಲಿ ಆತಂಕ ಮೂಡಿದೆ.

ಆರೆ ಬೇಸಾಯವಾಗಿ ಕೊಳವೆ ಬಾವಿಯಿಂದ ನೀರು ಬಳಕೆ ಮಾಡಿಕೊಂಡು ವ್ಯವಸಾಯ ಮಾಡಿದರೂ, ಜಮೀನಿಗೆ ಖರ್ಚು ಮಾಡಿದ ಹಣವು ಕಡಿಮೆ ಬೆಲೆಯಿಂದಾಗಿ ಸಿಗುತ್ತಿಲ್ಲಾ ಎಂದು ಈ ವ್ಯಾಪ್ತಿಯ ಹಲವು ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ