ಸೋಮವಾರಪೇಟೆ, ಏ. 8: ಕೊಡಗಿನ ರೂಪಾ ಮೋಹನ್ ಸೃಷ್ಟಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಜೇನು ಕುರುಬ ಸಮುದಾಯದ ಜೀವನ ಕ್ರಮಗಳ ಮೇಲೆ ಬೆಳಕು ಚೆಲ್ಲುವ ಕನ್ನಡ ಚಲನಚಿತ್ರ ಜೇನುಬೇಲಿ ಚಿತ್ರದ ಚಿತ್ರೀಕರಣಕ್ಕೆ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಚಾಲನೆ ನೀಡಲಾಯಿತು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ಚಿತ್ರಗಳು ಹೆಚ್ಚು, ಹೆಚ್ಚು ನಿರ್ಮಾಣವಾಗಬೇಕು. ಚಿತ್ರರಂಗ ಬೆಳೆಯಬೇಕು. ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಚಿತ್ರನೊಡುವಂತಾಗಬೇಕೆಂದು ಅಭಿಪ್ರಾಯಿಸಿದರು.
ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಇಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗುತ್ತಿವೆ. ಕನ್ನಡಿಗರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ನೋಡಿದರೆ ಚಿತ್ರರಂಗ ಉಳಿಯುತ್ತದೆ. ಕೊಡಗಿನ ಜೇನುಕುರುಬ ಸಮುದಾಯದ ಜೀವನ ಪದ್ಧತಿಯನ್ನು ತೆರೆಯ ಮೇಲೆ ಮೂಡಿಸುವ ಚಿತ್ರ ತಂಡದ ಪ್ರಯತ್ನ ಶ್ಲಾಘನೀಯ ಎಂದರು.
ಚಿತ್ರದ ನಿರ್ಮಾಪಕಿ, ನಿರ್ದೇಶಕಿ ರೂಪಾ ಮೋಹನ್ ಮಾತನಾಡಿ, ಜೇನು ಕುರುಬರ ಜೀವನಶೈಲಿ ಮತ್ತು ಅವರ ನೋವು ನಲಿವುಗಳ ಕಥೆಯನ್ನು ಒಳಗೊಂಡ ಕಲಾತ್ಮಕ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರವನ್ನು ಬಹುತೇಕ ಕೊಡಗಿನಲ್ಲಿಯೇ ಚಿತ್ರಿಕರಿಸಲಾಗುವುದು ಎಂದು ತಿಳಿಸಿದರು.
ಗಿರಿಜನರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಪೂರ್ಣ ಪ್ರಮಾಣದ ಎರಡು ಗಂಟೆಯ ಚಿತ್ರವಾಗಿದ್ದು, ಗಿರಿಜನರ ಹಾಡಿಗಳಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗುವುದು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಹಾಡಿಗೆ ಗಿರಿಜನರೆ ನುಡಿಸುವ ಸಂಗೀತವನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದರು.
ಸುಮಾರು 70 ವರ್ಷಗಳಿಂದಲೂ ಗಿರಿಜನರು ಕಾಡಿನ ಸರಹದ್ದಿನಲ್ಲಿ ಬದುಕುತ್ತಿದ್ದಾರೆ. ಅವರ ಬದುಕು, ಆರೋಗ್ಯ, ಶಿಕ್ಷಣ, ಆಹಾರ ಪದ್ದತಿ, ಅವರ ಸಂಪ್ರಾದಾಯಗಳು, ನೃತ್ಯ, ಅಚರಿಸುವ ಹಬ್ಬ ಹರಿದಿನಗಳು ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.
ಕಥೆ ಮತ್ತು ಚಿತ್ರಕಥೆ ಜೆ.ಎಂ.ಪ್ರಹ್ಲಾದ್, ಸಹಾಯಕ ನಿರ್ದೇಶನ ಶರತ್ ಬಿಳಿನೆಲೆ, ಛಾಯಾಗ್ರಹಣ ಸಂದೀಪ್ ಹೊನ್ನಾಳಿ, ಅದ್ವಿಕ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು ಚಿತ್ರೀಕರಣ ಮಹೂರ್ತ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬೇಳೂರಿನ ಕಾಫಿ ಬೆಳೆಗಾರರಾದ ಬಿ.ಜಿ. ಗುರುಮಲ್ಲೇಶ, ಕೆ.ಎಂ. ನಿರಂಜನ್, ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುದರ್ಶನ್, ಪ್ರಮುಖರುಗಳಾದ ಸೋಮೇಶ್, ಮಧು, ಶರತ್ ಸೇರಿದಂತೆ ಇತರರು ಇದ್ದರು.