ಸಿದ್ದಾಪುರ, ಏ. 8: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮಕ್ಕೆ ತೆರಳುವ ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೆÇನ್ನಣ್ಣ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕದ ಮುಖ್ಯಮಂತ್ರಿ ಅವರು ವೀರಾಜಪೇಟೆ ಕ್ಷೇತ್ರಕ್ಕೆ ವಿಶೇಷ ಕಾಳಜಿ ನೀಡಿ ಗ್ರಾಮೀಣ ಅಭಿವೃದ್ಧಿಗೆ ಸುಮಾರು ರೂ.23 ಕೋಟಿ ಅನುದಾನವನ್ನು ನೀಡಿದ್ದು ಇದರೊಂದಿಗೆ ಮಹಿಳಾ ಸಮಾಜ, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಇದಲ್ಲದೆ ಕ್ಷೇತ್ರದ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳನ್ನು ನಿವಾರಿಸಲೆಂದು ಸುಮಾರು ರೂ. 120 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ಸಿದ್ದಾಪುರದ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್ .ಬಿ. ಪ್ರತೀಶ್ ಮಾತನಾಡಿ, ಕಳೆದ 20 ವರ್ಷಗಳಿಂದ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೀವ್ರವಾಗಿ ಹದಗೆಟ್ಟಿದ್ದ ರಸ್ತೆಯನ್ನು ಶಾಸಕರಾದ ಪೆÇನ್ನಣ್ಣ ಅವರು ಅಭಿವೃದ್ಧಿಪಡಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು. ಚುನಾವಣೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ಗ್ರಾಮಸ್ಥರ ಮೂಲಭೂತ ಸೌಕರ್ಯಕ್ಕೆ ಶಾಸಕರು ಸ್ಪಂದಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವೀರಾಜಪೇಟೆ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಮತೀನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಜಾಫರ್ ಅಲಿ, ಸುಕೂರ್, ದೇವ ಜಾನು, ಪಳನಿಸ್ವಾಮಿ, ಪ್ರೇಮ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕೆ.ಯು. ಮಜೀದ್, ವಿ.ಕೆ. ಬಶೀರ್, ಅನಿಲ್ ಸೀನಪ್ಪ, ಚೇಕು, ನೆಲ್ಲಮಕ್ಕಡ ಪ್ರಕಾಶ್ ಕುಶಾಲಪ್ಪ ಹಾಗೂ ಇನ್ನಿತರರು ಹಾಜರಿದ್ದರು.