ಶನಿವಾರಸಂತೆ, ಏ. 8: ಹಿರಿಯರ, ಆತ್ಮೀಯರ ಸ್ಮರಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ನಿಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಾ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಸಾಪ ಶನಿವಾರಸಂತೆ ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ 2025-26ನೇ ಸಾಲಿನ ಕಟ್ಟೆಮನೆ ದಿ. ಎಸ್. ಪುಟ್ಟಸ್ವಾಮಿ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದತ್ತಿ ಉಪನ್ಯಾಸ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದ್ದು, ದತ್ತಿಯ ಹಣದಿಂದ ಕಸಾಪ ಮುಖ್ಯ ವರ್ಷಕ್ಕೊಮ್ಮೆ ಬರುವ ಬಡ್ಡಿ ಹಣದಲ್ಲಿ ಉಪನ್ಯಾಸ, ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಸಾಹಿತಿ ಶ.ಗ. ನಯನತಾರಾ ದತ್ತಿ ಉಪನ್ಯಾಸ ನೀಡಿ, ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ದಾನವಾಗಿ ನೀಡಿದ ಹಣದ ಬಡ್ಡಿಯಿಂದ ನಿರ್ಧಿಷ್ಟ ವಿಷಯದ ಮೇಲೆ ಪ್ರತಿವರ್ಷ ಆಯೋಜಿಸಲಾಗುವ ವಿಶೇಷ ಭಾಷಣವೇ ದತ್ತಿ ಉಪನ್ಯಾಸ ಎಂದರು.
ಶನಿವಾರಸಂತೆಯ ದತ್ತಿ ದಾನಿ ಲಲಿತಾ ಮಾತನಾಡಿ, ನಮ್ಮ ತಂದೆ ದಿ. ಪುಟ್ಟಸ್ವಾಮಿ ಅವರು ನೇರ ನಡೆ-ನುಡಿಯ ಶಿಸ್ತಿನ ವ್ಯಕ್ತಿತ್ವ ಹೊಂದಿದ್ದರು ಎಂದರು. ಕಾರ್ಯಕ್ರಮದಲ್ಲಿ ಕವಯತ್ರಿ ಲಾವಣ್ಯ ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಮ್ಮ ಕುಟುಂಬದ ಹಿರಿಯರ ಹೆಸರಲ್ಲಿ ದತ್ತಿ ಸ್ಥಾಪಿಸುವುದಾಗಿ ಲಾವಣ್ಯ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್ ಮಾತನಾಡಿ, ಶನಿವಾರಸಂತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣ ಪದಾಧಿಕಾರಿಗಳ ಹೋರಾಟದಿಂದ ಸಾಧ್ಯವಾಗಿದೆ. ಕನ್ನಡ ನಾಡು-ನುಡಿ ಅಭಿವೃದ್ಧಿಯ ಹಿನ್ನಲೆಯಲ್ಲಿ ಕಾರ್ಯಕ್ರಮಗಳು ಅತ್ಯಗತ್ಯವಾಗಿದೆ ಎಂದರು.
ತಾಲೂಕು ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ಜೆ.ಸಿ. ಶೇಖರ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಎ.ಪಿ. ವೀರರಾಜ್, ಜ್ಯೋತಿ ಅರುಣ್, ಹೋಬಳಿ ಘಟಕದ ಕಾರ್ಯದರ್ಶಿ ಎಂ.ಪಿ. ಮೋಹನ್, ನಿರ್ದೇಶಕರಾದ ಎಸ್.ಆರ್. ಶಿವಣ್ಣ ಹಾಗೂ ರಾಮು ಉಪಸ್ಥಿತರಿದ್ದರು. ಉಪನ್ಯಾಸಕಿ ಜ್ಯೋತಿ ಅರುಣ್ ಕಾರ್ಯಕ್ರಮ ನಿರ್ವಹಿಸಿದರು.