ಗೋಣಿಕೊಪ್ಪಲು, ಏ. 8: ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲುವಿನ ಅಥ್ಲಾನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದೇವಣಗೇರಿ ಮುಕ್ಕಾಟಿರ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾಟದಲ್ಲಿ 13 ತಂಡಗಳು ಸೆಣೆಸಾಟ ನಡೆಸಿದವು. ಅರಮಣಮಾಡ, ಬಾಚಿರ, ಮಲ್ಚಿರ, ಕೂತಂಡ, ಮಲ್ಲಾಜಿರ, ಕೇಚಮಾಡ, ಮಂಡೇಪಂಡ, ಮಲ್ಲೇಂಗಡ, ಮಲ್ಲಮಾಡ, ಕೊಟ್ಟಂಗಡ (ಬಿ), ಮಾಚಿಮಾಡ (ಬಿ), ಕಡೇಮಾಡ, ಹೊಟ್ಟೇಂಗಡ ಕುಟುಂಬದ ತಂಡಗಳು 2ನೇ ಸುತ್ತಿಗೆ ಪ್ರವೇಶ ಪಡೆದವು. ಪುಟ್ಟಿಚಂಡ, ಕಲ್ಲೆಂಗಡ, ಕೊಕ್ಕಲೆರ, ಅರೆಯಡ, ಕುಲ್ಲಚಂಡ, ಮುಕ್ಕಾಟಿರ (ಬಿ.ಬೇತ್ರಿ), ನಡಿಕೇರಿಯಂಡ (ಕರಡ), ಚೇನಂಡ (ಬಿ),ಮಂದೆನೆರವಂಡ, ಕಂಗಂಡ, ಐಚಂಡ, ಚೆಪ್ಪುಡಿರ ಹಾಗೂ ಚೊಟ್ಟೆಕ್‍ಮಾಡ ಕುಟುಂಬದ ತಂಡಗಳು ಪಂದ್ಯಾವಳಿಯಿಂದ ಹೊರ ನಡೆದವು. ಮುಂಜಾನೆ 8.30 ಗಂಟೆಯಿಂದ ರಾತ್ರಿ 9.30ರವರೆಗೂ ಹೊನಲು ಬೆಳಕಿನಲ್ಲಿ ಫುಟ್ಬಾಲ್ ಪಂದ್ಯಾವಳಿಗಳು 5 ಎ ಸೈಡ್ ಮಾದರಿಯಲ್ಲಿ ನಡೆದವು. ಪ್ರತಿ ಪಂದ್ಯಾವಳಿಯು ಅತ್ಯಂತ ರೋಚಕವಾಗಿ ಕಂಡು ಬಂತು. ಕೆಲವು ತಂಡಗಳು ಟೈ ಬ್ರೇಕರ್‍ನಲ್ಲಿ ಸೋಲು ಕಂಡವು. ಮೈದಾನದ ಸುತ್ತಲೂ ಅಳವಡಿಸಲಾದ ಗ್ಯಾಲರಿಗಳಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಸಿಲಿನ ತಾಪವನ್ನು ಲೆಕ್ಕಿಸದೆ ಕ್ರೀಡಾಪಟುಗಳು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದರು.
ತಾಂತ್ರಿಕ ವಿಭಾಗದಲ್ಲಿ ಮುಕ್ಕಾಟಿರ ನಿಕ್ಕಿ ಅಪ್ಪಚ್ಚು,ಮುಕ್ಕಾಟಿರ ಮಿಲನ್ ಅಪ್ಪಚ್ಚು, ಮುಕ್ಕಾಟಿರ ರೇಹಾ ಅಪ್ಪಚ್ಚು, ಮುಕ್ಕಾಟಿರ ಶೈಲಾ ನಂಜಪ್ಪ, ಮುಕ್ಕಾಟಿರ ಪವನ್ ನಂಜಪ್ಪ, ಮುಕ್ಕಾಟಿರ ನಿವ್ಯತಂಗಮ್ಮ, ಕ್ರೀಡಾ ವಿಶ್ಲೇಷಕರಾಗಿ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಹಾಗೂ ಮೂಕಚಂಡ ಸರಿತಾ ಬೊಳ್ಳಮ್ಮ ಕಾರ್ಯನಿರ್ವಹಿಸಿದರು. ಪಂದ್ಯಾವಳಿಯಲ್ಲಿ ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಸೋಮಯ್ಯ ನೇತೃತ್ವದಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದು, ಮುಕ್ಕಾಟಿರ ಕುಟುಂಬಸ್ಥರು ಭಾಗವಹಿಸಿದ್ದರು.