ಮಡಿಕೇರಿ, ಏ. 8: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 26ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ - ಚೇನಂಡ ಕಪ್ನ 4 ನೇ ದಿನದ ಪಂದ್ಯಾಟದಲ್ಲಿ ಅಲ್ಲಾರಂಡ, ಬೇಪಡಿಯಂಡ, ಚಪ್ಪಂಡ, ಬಾದುಮಂಡ, ಅಲ್ಲಪಂಡ, ಕನ್ನಿಗಂಡ, ಮುಕ್ಕಾಟಿರ, ಜಮ್ಮಡ, ಮಣವಟ್ಟಿರ, ಕಾಂಡೆರ ತಂಡಗಳು 5ಕ್ಕಿಂತ ಹೆಚ್ಚು ಗೋಲುಗಳನ್ನು ಭಾರಿಸಿ ಗಮನ ಸೆಳೆದವು.
ಅಲ್ಲಾರಂಡ ತಂಡವು ಬಲ್ಲಣಮಾಡ ತಂಡವನ್ನು 6-0 ಗೋಲುಗಳ ಅಂತರದಲ್ಲಿ ಸೋಲಿಸಿ ಭರ್ಜರಿ ಗೆಲುವು ಸಾಧಿಸಿತು. ಮುಂಡೋಟಿರ ತಂಡವು ಮೋಟನಾಳಿರ ತಂಡವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿತು. ಮುಂಡೋಟಿರ ಪರ ಕಾರ್ಯಪ್ಪ ಹ್ಯಾಟ್ರಿಕ್ ಗೋಲಿನ ಸಾಧನೆಗೈದರು. ಬೇಪಡಿಯಂಡ ತಂಡವು ಕೇಕಡ ತಂಡವನ್ನು 5-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತ ಪ್ರವೇಶಿಸಿತು.
ಶಿವಚಾಳಿಯಂಡ ತಂಡವು 2-0 ಗೋಲುಗಳ ಅಂತರದಿಂದ ಕಾವಡಿಚಂಡವನ್ನು ಮಣಿಸಿ ಮುಂದಿನ ಹಂತ ತಲುಪಿತು. ಚೆರಿಯಪಂಡ ತಂಡವು ಮಾಳೆಯಂಡ ತಂಡವನ್ನು 4-3 ಗೋಲುಗಳ ಅಂತರದಲ್ಲಿ ಸೋಲಿಸಿತು. ಚಪ್ಪಂಡ ಹಾಗೂ ಕಟ್ಟೇರ ನಡುವಿನ ಪಂದ್ಯದಲ್ಲಿ ಚಪ್ಪಂಡ ತಂಡವು 5-4 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಕಾಳಿಮಾಡ ತಂಡವು ಚೇರಂಡ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು.
ಬಾದುಮಂಡ ತಂಡವು ಚಂಗೇಟಿರವನ್ನು 5-0 ಅಂತರದಲ್ಲಿ ಮಣಿಸಿತು. ಚಿಮ್ಮಣಮಾಡ ತಂಡವು ಅಲ್ಲಂಡ ತಂಡವನ್ನು 5-0 ಅಂತರದಿಂದ ಸೋಲಿಸಿತು. ಅಲ್ಲಪಂಡ ತಂಡವು ಚೆಟ್ರುಮಾಡ ತಂಡವನ್ನು 8-0 ಗೋಲುಗಳಿಂದ ಸೋಲಿಸಿತು. ಅಲ್ಲಪಂಡ ಬನ್ಸಿ ಪೊನ್ನಪ್ಪ 5 ಗೋಲುಗಳನ್ನು ಬಾರಿಸಿ ದಾಖಲೆ ನಿರ್ಮಿಸಿದರು. ಕನ್ನಿಗಂಡ ತಂಡವು ಬೊಳ್ತಂಡವನ್ನು 6-0 ಗೋಲುಗಳಿಂದ ಮಣಿಸಿತು. ಕನ್ನಿಗಂಡ ಸುಚಿನ್ ಹ್ಯಾಟ್ರಿಕ್ ಸಾಧನೆಗೈದರು. ಕಾಡ್ಯಮಾಡ ತಂಡವು 4-0 ಅಂತರದಲ್ಲಿ ಮದ್ರಿರ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಅಜ್ಜಮಾಡ ತಂಡವು ಬಲ್ಲಡಿಚಂಡ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತು. ಬಾಳೆಕುಟ್ಟಿರ (ಮೈತಾಡಿ) ಹಾಗೂ ಮಂದತಂಡ ನಡುವಿನ ಪಂದ್ಯದಲ್ಲಿ ಬಾಳೆಕುಟ್ಟಿರಕ್ಕೆ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು. ಮುಕ್ಕಾಟಿರ(ಕುಂಜಿಲಗೇರಿ) ತಂಡವು 6-4 ಗೋಲುಗಳಿಂದ ಕೋಳುಮಾಡಂಡವನ್ನು ಮಣಿಸಿತು. ಜಮ್ಮಡ ತಂಡವು ಚೆಟ್ಟೀರವನ್ನು 5-0 ಗೋಲುಗಳಿಂದ ಸೋಲಿಸಿತು. ಬಡ್ಡೀರ ತಂಡವು ಪಳೆಯಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಪಾಲಂದಿರ ತಂಡವು 2-0 ಗೋಲುಗಳಿಂದ ಕಾಣತಂಡವನ್ನು ಮಣಿಸಿತು. ಮಣವಟ್ಟಿರ ತಂಡವು ಕೀತಿಯಂಡದ ವಿರುದ್ಧ 6-0 ಗೋಲು ಬಾರಿಸಿ ಜಯ ಸಾಧಿಸಿತು. ಕಾಂಡೆರ ತಂಡವು 5-0 ಗೋಲುಗಳಿಂದ ಕೊಟ್ಟುಕತ್ತೀರ ತಂಡವನ್ನು ಮಣಿಸಿತು. ಕೇತಿರ - ಚೀಯಂಡಿರ ತಂಡಗಳ ನಡುವಿನ ಪಂದ್ಯದಲ್ಲಿ 0-0 ಸಮಬಲ ಸಾಧನೆಯಾಗಿ ಟೈ ಬ್ರೇಕರ್ನಲ್ಲಿ ಕೇತಿರ ತಂಡವು 4-2 ಗೋಲುಗಳಿಂದ ಜಯ ಸಾಧಿಸಿತು.