ಮಡಿಕೇರಿ, ಏ. 7: ಮೌಲ್ಯಧಾರಿತ ಚಿಂತನೆಗಳಿಗೆ ಒತ್ತು ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಬಿಜೆಪಿ ಪ್ರಶಿಕ್ಷಣ ವರ್ಗದ ಮೈಸೂರು ವಿಭಾಗ ಮಟ್ಟದ ಸಂಯೋಜಕ ಕ್ಯಾ. ಗಣೇಶ್ ಕಾರ್ಣಿಕ್ ಕರೆ ನೀಡಿದರು.
ನಗರದ ರಾಜ್ ದರ್ಶನ್ ಹೊಟೇಲ್ ಸಭಾಂಗಣದಲ್ಲಿ ಮಡಿಕೇರಿ ನಗರ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿಗಿರುವ ರಾಷ್ಟ್ರೀಯತೆ ಸಮಗ್ರತೆ, ಅನುಶಾಸನ ಬಗ್ಗೆ ಗೊಂದಲವಿಲ್ಲ. ಬಿಜೆಪಿ ಉಳಿದ ರಾಜಕೀಯ ಪಕ್ಷದ ರೀತಿಯಲ್ಲ. ದೇಶದ ಬಗ್ಗೆ ಚಿಂತಿಸುವ, ಸದೃಢ ಸಮಾಜ ನಿರ್ಮಿಸುವ ಧ್ಯೇಯವನ್ನು ಬಿಜೆಪಿ ಕಾರ್ಯಕರ್ತರು ಹೊಂದಿದ್ದಾರೆ. ಕಾರ್ಯಕರ್ತರಿಗೆ ಮೊದಲು ಪಕ್ಷದ ಬಗ್ಗೆ ವಿಶ್ವಾಸ ಮೂಡಬೇಕು. ಸಿದ್ಧಾಂತಗಳನ್ನು ಅರ್ಥೈಸಿಕೊಳ್ಳಬೇಕು. ಮೌಲ್ಯಧಾರಿತ ಚಿಂತನೆಗಳಿಗೆ ಒತ್ತು ನೀಡಬೇಕು. ಗುರಿ, ಉದ್ದೇಶ ಸ್ಪಷ್ಟವಿದ್ದರೆ ಯಶಸ್ಸು ಸಾಧ್ಯವಾಗಿದ್ದು, ರಾಷ್ಟ್ರೀಯತೆ, ರಾಷ್ಟ್ರೀಯ ಸಮಗ್ರತೆ ಬಿಜೆಪಿಯ ಮೂಲ ಉದ್ದೇಶವಾಗಿದೆ ಎಂದರು.
ಪಕ್ಷದ ಸೈದ್ಧಾಂತಿಕ ನೆಲೆಗಟ್ಟು ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಬೇಕು. ದೇಶದಲ್ಲಿ ಏಕರೂಪ ನೀತಿ ಸಂಹಿತೆ ತರಲು ಪ್ರಯತ್ನಿಸದ ಪಕ್ಷ ಬಿಜೆಪಿ ಮಾತ್ರ. ಸಕಾರಾತ್ಮಕ ಜಾತ್ಯಾತೀತತೆ ಮೇಲೆ ನಂಬಿಕೆ ಇಟ್ಟು ಅದನ್ನು ನಾವು ಬೆಂಬಲಿಸುತ್ತಿದ್ದೇವೆ. ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬರುವ ಮೊದಲು ಹಗರಣಗಳ ಸರಮಾಲೆ ಇತ್ತು. ಮೌಲ್ಯಾಧರಿತ ರಾಜಕಾರಣವನ್ನು ದೇಶದಲ್ಲಿ ಇದೀಗ ಸೃಷ್ಟಿಸಲಾಗಿದೆ. ನಮ್ಮ ದೇಶ ಬಾಂಗ್ಲ ರೀತಿ ಆಗಬಾರದು. ಪರಿಣಾಮಕಾರಿಯಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಭವಿಷ್ಯ ಬಗ್ಗೆ ಚಿಂತನೆ ಮಾಡಬೇಕು. ಜಾಗತಿಕ ನಾಯಕರ ಪೈಕಿ ಹೆಚ್ಚು ಪ್ರಸಿದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಪಡೆದಿದ್ದಾರೆ. ಭಾರತದ ಸದೃಢತೆಗೆ ಎಲ್ಲರೂ ಕೈಜೋಡಿಸಬೇಕು. ಯುದ್ಧದಿಂದ ಬೇರೆ 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಮಾತ್ರ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ಆತ್ಮಾವಲೋಕನ ಮಾಡಿಕೊಂಡು ಸರಿ ದಾರಿಯೆಡೆಗೆ ಸಾಗುವಂತೆ ಕರೆ ನೀಡಿದರು.
ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಬೇರೆ ಪಕ್ಷಗಳಿಗಿಂತ ಬಿಜೆಪಿ ವಿಭಿನ್ನ ಪಕ್ಷವಾಗಿ ಗುರುತಿಸಿಕೊಂಡಿದೆ. ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬೂತ್ ಮಟ್ಟದ ಕಾರ್ಯಕರ್ತರೆ ಪಕ್ಷದ ಅಡಿಪಾಯವಾಗಿದ್ದಾರೆ. ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತಿದೆ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತನನ್ನು ಗುರುತಿಸಿ ಸೂಕ್ತ ಸ್ಥಾನಮಾನವನ್ನು ನೀಡಲಾಗುತ್ತದೆ. ಇದಕ್ಕೆ ನೂತನ ರಾಷ್ಟ್ರೀಯ ಅಧ್ಯಕ್ಷರು ಸಾಕ್ಷಿಯಾಗಿದ್ದಾರೆ. ಅಲ್ಲದೆ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದಿರಲು ಪಕ್ಷದ ನೀತಿ ಕಾರಣವಾಗಿದೆ. ರಾಷ್ಟ್ರ ಮೊದಲು ಎಂಬ ಸಿದ್ಧಾಂತ ನಮ್ಮದಾಗಿದ್ದು, ನಮ್ಮ ನಡವಳಿಕೆ, ಚಿಂತನೆ ಪಕ್ಷದ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಕೊಡಗಿನಲ್ಲಿ ಬಿಜೆಪಿಗೆ ಸವಾಲಿನ ದಿನಗಳಾಗಿವೆ. ನಮ್ಮದೇ ಆದ ತಪ್ಪಿನಿಂದ 2 ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಹತಾಶರಾಗದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಚುನಾವಣೆಯೊಂದಿಗೆ ಭಾರತವನ್ನು ಉಳಿಸುವ ಬದ್ಧತೆ ಇರಬೇಕು. ಮುಂದಿನ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ಗೆಲುವಿಗಾಗಿ ಕಟಿಬದ್ಧರಾಗಿ ದುಡಿಯಬೇಕೆಂದರು.
ಪ್ರಶಿಕ್ಷಣ ವರ್ಗದ ಸಹಸಂಯೋಜಕ ಪಣೀಶ್ ಮಾತನಾಡಿ, ಪ್ರಶಿಕ್ಷಣ ವರ್ಗದಿಂದ ಕಲಿಯುವ ಅವಕಾಶ ಸೃಷ್ಟಿಯಾಗುತ್ತದೆ. ಕಲಿತಿರುವುದನ್ನು ಇತರರಿಗೆ ಹಂಚಬೇಕು. ಒಳ್ಳೆಯ ದೃಷ್ಟಿಕೋನ ಹೊಂದಬೇಕು. ಪ್ರಶಿಕ್ಷಣ ವರ್ಗದಿದ ಹೊಸ ಬೆಳಕು ಮೂಡುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಯಕರ್ತರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಪಕ್ಷಕ್ಕೆ ಇರುವ ಪ್ರತಿಷ್ಠೆ, ಬದ್ಧತೆ, ಗೌರವಕ್ಕೆ ಚ್ಯುತಿ ಬಾರದಂತೆ ಕಾಯಕರ್ತರು ಕೆಲಸ ಮಾಡಬೇಕೆಂದು ಹೇಳಿದರು.
ನಗರ ಮಂಡಲ ಉಮೇಶ್ ಸುಬ್ರಮಣಿ, ಪ್ರಶಿಕ್ಷಣ ವರ್ಗದ ಮೈಸೂರು ವಿಭಾಗ ಮಟ್ಟದ ಸಹಸಂಯೋಕ ಬಾಲಸುಬ್ರಮಣ್ಯ ಉಪಸ್ಥಿತರಿದ್ದರು.
ಬಿ.ಕೆ. ಅರುಣ್ ಕುಮಾರ್ ವಂದೇ ಮಾತರಂ ಗೀತೆ ಹಾಡಿದರು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ನಿರೂಪಿಸಿ, ಸ್ವಾಗತಿಸಿದರು. ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ ವಂದಿಸಿದರು.