ಕುಶಾಲನಗರ, ಏ. 7: ಕುಶಾಲನಗರ ಹಾರಂಗಿ ಅಣೆಕಟ್ಟು ವಿಭಾಗದ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಅವರ ನಿವಾಸ ಮತ್ತು ಕಚೇರಿಗಳಿಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸೇರಿದಂತೆ ಭಾರೀ ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಲೋಕಾಯುಕ್ತ ಎಸ್ ಪಿ ಉದೇಶ್, ಮತ್ತು ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಮೈಸೂರು-ಹಾಸನದ ನಿವಾಸಗಳು ಮತ್ತು ಕುಶಾಲನಗರದ ಹಾರಂಗಿ ಅಣೆಕಟ್ಟು ವಿಭಾಗ ಮತ್ತು ಉಪ ವಿಭಾಗ ಕಚೇರಿಗಳಿಗೆ ಮಂಗಳವಾರ ಮುಂಜಾನೆ ದಾಳಿ ನಡೆದಿದ್ದು ಚಿನ್ನಾಭರಣ, ಬೆಳ್ಳಿ, ಲಕ್ಷಾಂತರ ಮೊತ್ತದ ನಗದು, ವಾಹನ ಮತ್ತು ನಿವೇಶನಗಳನ್ನು ವಶಪಡಿಸಿಕೊಂಡಿದ್ದಾರೆ.

ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿರುವ ಮಾಹಿತಿ ಹಿನ್ನೆಲೆಯಲ್ಲಿ ಮೈಸೂರಿನ ತಿಲಕ ನಗರದಲ್ಲಿ ಬಾಡಿಗೆ ಮನೆ ಹೊಂದಿರುವ ಪುಟ್ಟಸ್ವಾಮಿ ಅವರ ಮನೆಗೆ ಮುಂಜಾನೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ, ಇದೇ ಸಂದರ್ಭ ಹಾಸನದಲ್ಲಿ ಪುಟ್ಟಸ್ವಾಮಿ ಅವರ ಸ್ವಂತ ಮನೆಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕುಶಾಲನಗರದಲ್ಲಿ ಹಾರಂಗಿ ಅಣೆಕಟ್ಟು ವಿಭಾಗದ ಕಚೇರಿ ಮತ್ತು ಕುಶಾಲನಗರದ ಹೆಚ್‍ಆರ್‍ಪಿ ಕಾಲೋನಿಯಲ್ಲಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಲೋಕಾಯುಕ್ತ ಡಿವೈಎಸ್‍ಪಿ ದಿನಕರ ಶೆಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಕಡತಗಳ ಪರಿಶೀಲನೆ ನಡೆಸಲಾಗಿದೆ. ಹಾಸನದ ಮನೆಯಲ್ಲಿ 900 ಗ್ರಾಂ ಚಿನ್ನ, 2,5 ಕೆಜಿ ಪ್ರಮಾಣದ ಬೆಳ್ಳಿ, 5.5 ಲಕ್ಷ ನಗದು ಒಂದು ಕಾರು, 6 ನಿವೇಶನಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‍ಪಿ ದಿನಕರ ಶೆಟ್ಟಿ ಮಾಹಿತಿ ನೀಡಿದ್ದಾರೆ. ಲೋಕಾಯುಕ್ತ ಎಸ್‍ಪಿ ಉದೇಶ್ ಅವರ ನೇತೃತ್ವದಲ್ಲಿ ಪರಿಶೀಲನೆ ಮುಂದುವರೆದಿದ್ದು 4ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮೈಸೂರಿನ ನಿವಾಸದಲ್ಲಿದ್ದ ಪುಟ್ಟಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಪುಟ್ಟಸ್ವಾಮಿ ಅವರು ಕುಶಾಲನಗರದಲ್ಲಿ ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರರಾಗಿದ್ದು ಕೆಲವು ಸಮಯದಿಂದ ಹಾರಂಗಿ ಅಣೆಕಟ್ಟು ವಿಭಾಗದ ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಉಮೇಶ್, ಲೋಹಿತ್ ಕುಮಾರ್, ವೀಣಾ ನಾಯಕ್, ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.