ವೀರಾಜಪೇಟೆ, ಏ. 5: ಇಲ್ಲಿನ ಕೊಡಗು ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶಾಲಿ ಪ್ರಮೋದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಿನ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಛಾಪುಮೂಡಿಸುತ್ತಿದ್ದಾರೆ. ದೇಶದ ಯಶಸ್ಸಿನ ಹಿಂದೆ ಎಷ್ಟೋ ಕೋಟಿ ಹೆಣ್ಣುಮಕ್ಕಳ ಶ್ರಮವಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದರು.
ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ದೇಶಕರುಗಳ ಸಹಕಾರದಿಂದ ಸಮಾಜ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ತ್ರೀ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದರು.
ವಕೀಲರಾದ ಪ್ರಮೋದ್ ಅವರ ಪತ್ನಿ ವಿಶಾಲಿ ಪ್ರಮೋದ್, ಸಾಹಿತಿ, ಪತ್ರಕರ್ತೆ ರಜಿತ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಮನೋರಂಜನೆ ಹಾಗೂ ಆಟೋಟ ಸ್ಪರ್ಧೆ ನಡೆಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ.ಯಶೋಧ, ಹೆಚ್.ಆರ್. ಪುಷ್ಪ ವಾಸು, ಪುಷ್ಪ ಐತಪ್ಪ, ಮೆಟಿಲ್ಡಾ ಲೋಬೋ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಸದಸ್ಯರುಗಳು, ಸಿಬ್ಬಂದಿ ಹಾಜರಿದ್ದರು.