(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಏ. 4: ಕೊಡಗು ಜಿಲ್ಲೆಯ 103 ಗ್ರಾ.ಪಂಗಳಲ್ಲಿ 2025-26ನೆ ಸಾಲಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹ ಗುರಿ ಸಾಧನೆಯಾಗದಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ರೂ.15 ಕೋಟಿ 44 ಲಕ್ಷದ 17 ಸಾವಿರದ 390 ಮಾರ್ಚ್ 31 ರವರೆಗೆ ಸಂಗ್ರಹವಾಗಿದ್ದು, ಇನ್ನೂ ಕೂಡ ರೂ.15 ಕೋಟಿ 47 ಲಕ್ಷದ 64 ಸಾವಿರ 617 ಸಂಗ್ರಹವಾಗಬೇಕಿದೆ.
ಜಿಲ್ಲೆಯ ಗ್ರಾ.ಪಂಗಳಲ್ಲಿ 2025-26ನೇ ಆರ್ಥಿಕ ವರ್ಷದಲ್ಲಿ ಹಳೆಯ ತೆರಿಗೆ ಸೇರಿ ರೂ.14 ಕೋಟಿ ಒಂದು ಲಕ್ಷದ 61 ಸಾವಿರದ 712 ಸಂಗ್ರಹವಾಗಲು ಬಾಕಿ ಉಳಿದಿತ್ತು. 2025-26ನೇ ಸಾಲಿನಲ್ಲಿ ಹೊಸದಾಗಿ ರೂ.17 ಕೋಟಿ 24 ಸಾವಿರದ 723 ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಹಳೆಯ ತೆರಿಗೆ ಬಾಕಿ ಸೇರಿ 2025-26ನೇ ಸಾಲಿನಲ್ಲಿ ಜಿಲ್ಲೆಯ 103 ಗ್ರಾ.ಪಂಗಳು ಒಟ್ಟುರೂ. 31 ಕೋಟಿ 1 ಲಕ್ಷದ 86 ಸಾವಿರದ 435 ಸಂಗ್ರಹಿಸಲು ಗುರಿ ಹೊಂದಿದ್ದವು. ಆದರೆ ರೂ.15 ಕೋಟಿ 44 ಲಕ್ಷದ 17 ಸಾವಿರದ 390 ಸಂಗ್ರಹವಾಗಿದ್ದು, ಇನ್ನೂ ಕೂಡ ರೂ.15 ಕೋಟಿ 47 ಲಕ್ಷದ 64 ಸಾವಿರದ 617 ಸಂಗ್ರಹವಾಗಬೇಕಿದೆ.
ಆಸಕ್ತಿ ತೋರದ ಜನತೆ
ತೆರಿಗೆ ಪಾವತಿಸಲು ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸಲು ವಿಶೇಷ ತೆರಿಗೆ ಅಭಿಯಾನವನ್ನು ಕಳೆದ ಮೂರು ತಿಂಗಳಿಂದ ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ ಸಿಬ್ಬಂದಿಗಳು ಹರಸಾಹಸಪಟ್ಟರು ಕೂಡ ಸಾರ್ವಜನಿಕರು ತೆರಿಗೆ ಪಾವತಿಸಲು ಮುಂದಾಗುತ್ತಿಲ್ಲ. ಬಹುತೇಕರು ಹಳೆಯ ತೆರಿಗೆ ಹಣ ಪಾವತಿಸದೆ ಕೇವಲ ಒಂದೆರಡು ವರ್ಷದ ತೆರಿಗೆ ಹಣ ಪಾವತಿಸುವುದರಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ ತೆರಿಗೆ ಸಂಗ್ರಹವಾಗದೆ ಬಾಕಿ ಉಳಿದಿದೆ. ಮತ್ತೊಂದೆಡೆ ತೆರಿಗೆ ಪಾವತಿಸದವರ ನೀರಿನ ಸಂಪರ್ಕ ಹಾಗೂ ಇನ್ನಿತರ ಸೇವೆಗಳನ್ನು ಕಡಿತಗೊಳಿಸಲು ಮುಂದಾದರೆ ಸ್ಥಳೀಯ ವಾರ್ಡಿನ ಗ್ರಾಮ ಪಂಚಾಯಿತಿ ಸದಸ್ಯರು ರಾಜಕೀಯ ಪ್ರಭಾವ ಬೀರುತ್ತಿರುವುದು ಸಾಮಾನ್ಯವಾಗಿ ನಡೆಯುವ ಘಟನೆಯಾಗಿದೆ. ಇದಲ್ಲದೇ ವರ್ಷಗಟ್ಟಲೇ ಅಂಗಡಿಗಳ ಪರವಾನಗಿ ನವೀಕರಣಗೊಳಿಸದೆ ಕಾರ್ಯನಿರ್ವಹಿಸುತ್ತಿರುವ ಹಲವು ಅಂಗಡಿ-ಮುಂಗಟ್ಟುಗಳು ಕೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ, ಸಿಬ್ಬಂದಿಗಳ ವೇತನ, ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಕಚೇರಿ ನಿರ್ವಹಣೆಗೆ ತೆರಿಗೆ ಹಣ ಅವಶ್ಯ. ಆಶ್ಚರ್ಯವೇನೆಂದರೆ ಗ್ರಾಮ ಪಂಚಾಯಿತಿ ಸದಸ್ಯರೇ ಬಹುತೇಕ ಕಡೆಗಳಲ್ಲಿ ತೆರಿಗೆ ಹಣವನ್ನು ವಾರ್ಷಿಕವಾಗಿ ಪಾವತಿಸದೆ, ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಕಂದಾಯ ಪಾವತಿಯ ರಶೀದಿ ಬೇಕಾದ ಕಾರಣದಿಂದ ಒಂದೇ ಬಾರಿ ಕಂದಾಯ ಪಾವತಿಸಿರುವ ನಿದರ್ಶನಗಳು ಕೂಡ ಇವೆ.
ಕೊಡಗು ಜಿಲ್ಲೆಯ ವಿವಿಧ ಗ್ರಾಪಂ ವ್ಯಾಪ್ತಿಗಳಲ್ಲಿ ರೆಸಾರ್ಟ್, ಹೋಂ ಸ್ಟೇ, ಹೋಟೆಲ್ ರೆಸ್ಟೋರೆಂಟ್ಗಳು 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯನಿರ್ವಹಿಸುತ್ತಿವೆ, ಸರಿಯಾದ ಅವಧಿಗೆ ಇವುಗಳಿಂದ ತೆರಿಗೆ ಸಂಗ್ರಹಿಸಲು ಆಯಾ ಗ್ರಾಮ ಪಂಚಾಯಿತಿ ಆಸಕ್ತಿ ವಹಿಸಿದರೆ ಜಿಲ್ಲೆಯಲ್ಲಿ ತೆರಿಗೆ ಸಂಗ್ರಹದ ಗುರಿ ಸಾಧಿಸಬಹುದಾಗಿದೆ.