ಕೂಡಿಗೆ, ಏ. 5: ರೈತರು ಕೃಷಿಯೊಂದಿಗೆ ಅರಣ್ಯ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಕೃಷಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಹೆಚ್ಚಿನ ಲಾಭ ಗಳಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಹೇಳಿದರು.
ಕೊಡಗು ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ವಿಭಾಗ, ಮಡಿಕೇರಿ ಹಾಗೂ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ವತಿಯಿಂದ ಕೂಡಿಗೆ ಬಳಿಯ ಹುದುಗೂರು ಅರಣ್ಯ ಸಸ್ಯಕ್ಷೇತ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಮತ್ತು ಅರಿವು, ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಅರಣ್ಯದಿಂದ ಕೃಷಿ ಭೂಮಿಯ ಅಂತರ್ಜಲ ವೃದ್ಧಿ ಸಾಧ್ಯ. ಇಂದಿನ ಹವಾಮಾನ ವೈಪರೀತ್ಯ, ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಒಂದು ಬೆಳೆ ಕೈಕೊಟ್ಟರೂ, ಅರಣ್ಯ ಕೃಷಿಯಿಂದ ಬರುವ ಮರಗಳ ಆದಾಯವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಇದು ರೈತರ ಆದಾಯದ ವೈವಿಧ್ಯೀಕರಣಕ್ಕೆ ಹೆಚ್ಚಿನ ಲಾಭ ತರುತ್ತದೆ ಎಂದರು.
ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಅರಣ್ಯ ಸಂರಕ್ಷಿಸಿಕೊಳ್ಳಬೇಕು ಎಂದರು. ರೈತರಿಗೆ ಅರಣ್ಯ ಇಲಾಖೆಯ ವತಿಯಿಂದ ಸಿಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದ ಸಾಮಾಜಿಕ ಅರಣ್ಯ ವಲಯಾಧಿಕಾರಿ ಎಂ. ಗಣೇಶ್, ರೈತರು ಅರಣ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಿದರೆ ಸುಸ್ಥಿರ ಆದಾಯ ಗಳಿಸಲು ಸಾಧ್ಯ. ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿ ಭೂಮಿಯ ಮಣ್ಣಿನ ಫಲವತ್ತತೆ, ಅಂತರ್ಜಲ ವೃದ್ಧಿ ಮತ್ತು ಪರಿಸರ ಸಮತೋಲನವನ್ನು ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಸ್. ಮಂಜುಳ ಮಾತನಾಡಿ, ರೈತರು ಅರಣ್ಯ, ಕೃಷಿ ಮತ್ತಿತರ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕೃಷಿಕರಾಗಿ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದರು. ಹುದುಗೂರಿನ ಪ್ರಗತಿಪರ ರೈತ ಐಮುಡಿಯಂಡ ಗಣೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಎಸ್. ರವಿ, ಡಿಆರ್‍ಎಫ್‍ಓ ಎನ್.ಬಿ. ಹರೀಶ್ ಕುಮಾರ್, ತಾಂತ್ರಿಕ ಸಲಹೆಗಾರರಾದ ಶೀತಲ್, ವನಪಾಲಕರಾದ ಸೋಮಶೇಖರ್, ಅನಿಲ್ ಸೇರಿದಂತೆ ಹುದಗೂರು ಮತ್ತು ಸುತ್ತಲಿನ ರೈತರು ಭಾಗವಹಿಸಿದ್ದರು.