ಶಾಂತಮಲ್ಲಿಕಾರ್ಜುನ ಸ್ವಾಮೀಜಿ
ವೀರಾಜಪೇಟೆ, ಏ. 5: ಕೊಡಗಿನಲ್ಲಿಯೂ ಉತ್ತಮ ಸಾಹಿತಿಗಳು, ಬರಹಗಾರರಿದ್ದು, ಅವರಿಂದ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಪುಸ್ತಕಗಳು ಹೊರಬರಬೇಕು ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ 241 ಮಾಸಿಕ ತತ್ವಚಿಂತನಾಗೋಷ್ಠಿ ಹಾಗೂ ಕುಶಾಲಗರದ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶತಮಾನ ಕಂಡ ರಾಷ್ಟ್ರಗೀತೆ ಹಾಗೂ ನಾಡಗೀತೆಗಳ ಸಂಭ್ರಮ, ಕವಿ ಸಾಹಿತಿಗಳ ಸ್ಮರಣೆ ಮಾಸದ ನೆನಪು ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕವಿ ಗೋವಿಂದ ಪೈ, ಕೊಡಗಿನ ಗೌರಮ್ಮ, ಸಂತ ಶಿಶುನಾಳ ಶರೀಫರು ಜನತೆಗೆ ಉತ್ತಮ ಸಾಹಿತ್ಯವನ್ನು ನೀಡಿದ್ದಾರೆ ಎಂದರು. ಲೇಖಕಿ ವಿಜಯಾ ವಿಷ್ಣುಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಇಂತಹ ಮಠಗಳು ಅಗತ್ಯ. ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೊಂಬೆಳಕು ಕಾರ್ಯಕ್ರಮ ಜನರಿಗೆ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದೆ ಎಂದರು.
ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಭಾರತ ಜನನಿಯ ತನುಜಾತೆ ನಾಡಗೀತೆ ಪ್ರತಿಯೊಬ್ಬರು ನೆನಪಿಡುವಂತಹ ಗೀತೆಯಾಗಿದೆ ಎಂದರು.
ಸಾಹಿತಿ ವಿಜಯಾ ವಿಷ್ಣುಭಟ್ ಅವರು ಬರೆದ 20ನೇ ಕೃತಿ ಊರ್ಮಿಳಾ-ಯುಗ ಯುಗದ ಅನಂತ ಮೌನ ಹಾಗೂ ಸಾಹಿತಿ ಕಿಗ್ಗಾಲು ಗಿರೀಶ್ ಅವರು ಬರೆದ 7ನೇ ಪತ್ತೇದಾರಿ ಕಾದಂಬರಿ ಕಮಟೂರಿನ ಫೈವ್ ಸ್ಟಾರ್ ಹೊಟೇಲ್ ಎಂಬ ಪುಸ್ತಕಗಳನ್ನು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಸಾಹಿತಿ ವಿಜಯಾ ವಿಷ್ಣುಭಟ್ ಮತ್ತು ಸಾಹಿತಿ ಕಿಗ್ಗಾಲು ಗಿರೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ವಿಷ್ಣುಭಟ್ ಸಾಹಿತ್ಯದ ಬಗ್ಗೆ, ಮೂರ್ನಾಡು ಕಾಲೇಜಿನ ಉಪನ್ಯಾಸಕ ಕಿಗ್ಗಾಲು ಹರೀಶ್ ಕವಿ ಗೋವಿಂದ ಪೈ ಅವರ ಬಗ್ಗೆ ಮಾತನಾಡಿದರು. ವೀರಾಜಪೇಟೆ ವೈದ್ಯ, ಸಾಹಿತಿ ಎಸ್.ವಿ. ನರಸಿಂಹನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕನ್ನಡಸಿರಿ ಸ್ನೇಹ ಬಳಗದ ಸದಸ್ಯರುಗಳಾದ ವೈಲೇಶ್, ಪುಷ್ಪಲತಾ ಶಿವಪ್ಪ, ಸಾಹಿತಿ ರಜಿತ ಕಾರ್ಯಪ್ಪ, ಪುಷ್ಪ ಶಿವರಾಂ ರೈ ಇದ್ದರು.ತುಂಗಾಶ್ರೀ ಸ್ವಾಗತಿಸಿ, ಸೋನಾ ನಿರೂಪಿಸಿದರು.