ಸೋಮವಾರಪೇಟೆ, ಏ. 4: ಹೆಚ್.ಡಿ. ಕೋಟೆ ತಾಲೂಕಿಗೆ ಒಳಪಡುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಬಿನಿ ಹಿನ್ನೀರು ಕಾಡಂಚಿನಲ್ಲಿ ವನ್ಯಜೀವಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಜಿಲ್ಲೆಯ ಇಬ್ಬರನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ, ಬಂದೂಕು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಕೆ.ಹೆಚ್. ಸುರೇಶ್ ಕುಮಾರ್ ಅಲಿಯಾಸ್ ಗಿರೀಶ್ ಹಾಗೂ ಎಂ.ಬಿ. ಮಧುಸೂದನ್ ಅಲಿಯಾಸ್ ಪ್ರಜ್ವಲ್ ಗೌಡ ಬಂಧಿತರು. ಇವರಿಂದ ಒಂದು ಆಲ್ಟೋ ಕಾರು (ಕೆಎ.04- ಎಂಜೆ.4989), ಡಬಲ್ ಬ್ಯಾರಲ್ ಗನ್, ಸಿಂಗಲ್ ಬ್ಯಾರಲ್ ಗನ್, 14 ಜೀವಂತ ಕಾಡತೂಸು, ಗನ್‍ಪೌಡರ್, ಸೀಸದ ಚಿಲ್ಸ್, ಕತ್ತಿಗಳು, ವಾಹನಗಳ ಕ್ಲಚ್ ವೈರ್‍ನಿಂದ ತಯಾರಿಸಿದ 6 ಉರುಳು, 2 ಟಾರ್ಚ್, ಗ್ಯಾಸ್ ಸಿಲಿಂಡರ್, ಬರ್ನರ್, ಟಾರ್ಪಲ್, ಕುಕ್ಕರ್, ಪಾತ್ರೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮೇಟಿಕುಪ್ಪೆ ವಲಯ ವ್ಯಾಪ್ತಿಯ ಹೆಚ್.ಡಿ. ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಜಮೀನಿನಲ್ಲಿ ಮಾ. 27 ರಂದು ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಾಡಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಿ, ಬೇಟೆಗಾರರ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಬಂಡೀಪುರ ಹುಲಿ - ಸಂರಕ್ಷಿತ ಪ್ರದೇಶದ ಭೀಮನಕೊಲ್ಲಿ ಮಹದೇಶ್ವರ ದೇವಾಲಯದ ಸಮೀಪ, ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಆಲ್ಟೋ ಕಾರಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ತಡೆದು, ಪರಿಶೀಲಿಸಿದಾಗ ಬೇಟೆಗೆ ಹೊಂಚು ಹಾಕುತ್ತಿರುವುದು ಬಯಲಾಯಿತು. ಅರಣ್ಯ ಸಿಬ್ಬಂದಿ ತಡೆದು ನಿಲ್ಲಿಸಿದಾಗ ತಾವು ಭೀಮನಕೊಲ್ಲಿ ಮಹದೇಶ್ವರ ದೇವಾಲಯಕ್ಕೆ ಬಂದಿರುವುದಾಗಿ ಹೇಳಿ, ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ ಅರಣ್ಯ ಸಿಬ್ಬಂದಿ, ಕಾರನ್ನು ಪರಿಶೀಲಿಸಿದಾಗ ಬೇಟೆಗಾಗಿ ತಂದಿದ್ದ ಗನ್, ಮಾರಕಾಸ್ತ್ರ ಪತ್ತೆಯಾದವು. ವಿಚಾರಣೆ ತೀವ್ರಗೊಳಿಸಿದಾಗ ಬೇಟೆ ಉದ್ದೇಶದಿಂದ ಬಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡರು ಎಂದು ಅರಣ್ಯ ಸಂಚಾರಿ ದಳದ ಸಿಬ್ಬಂದಿ ತಿಳಿಸಿದ್ದಾರೆ. ಬಂಧಿತರಿಬ್ಬರು ಕಳೆದ ಹಲವು ಸಮಯದಿಂದ ಭೀಮನಕೊಲ್ಲಿ ಸೇರಿದಂತೆ ವಿವಿಧೆಡೆ ಕಾಡುಹಂದಿ ಹಾಗೂ ಜಿಂಕೆ ಬೇಟೆಯಾಡುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಏ. 1 ರಂದು ಬೆಳಿಗ್ಗೆ ಸೋಮವಾರಪೇಟೆಯಿಂದ ಹೊರಟು ಮಧ್ಯಾಹ್ನ ಭೀಮನಕೊಲ್ಲಿ ಮಹದೇಶ್ವರ ದೇವಾಲಯದ ಬಳಿ ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಬಂದಿದ್ದಾರೆ. ಅಂದು ತೋಟಗಾರಿಕಾ ಇಲಾಖೆಗೆ ಸೇರಿದ ತಾಳೆ ತೋಟದ ಬೇಲಿಯಲ್ಲಿ ಆರು ಕಡೆ ಉರುಳು ಹಾಕಿ, ರಾತ್ರಿಯಿಡೀ ಕಾಡಂಚಿನ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲೇ ಕಾದಿದ್ದಾರೆ. ಆದರೆ ಉರುಳಿಗೆ ಯಾವ ಪ್ರಾಣಿಯೂ ಸಿಲುಕದ ಹಿನ್ನೆಲೆಯಲ್ಲಿ ಬೆಳಿಗ್ಗೆ ಉರುಳನ್ನು ತೆಗೆದುಕೊಂಡು ಬೇರೆಡೆ ಹಾಕುವ ಆಲೋಚನೆಯಲ್ಲಿದ್ದಾಗ ಅರಣ್ಯ ಸಂಚಾರಿ ದಳಕ್ಕೆ ಸಿಕ್ಕಿಬಿದ್ದಿದ್ದಾರೆ. ಅರಣ್ಯ ಸಂಚಾರಿ ದಳದ ಡಿಸಿಎಫ್ ಜಿ. ರುದ್ರೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್. ಎಫ್.ಓ. ಕೆ. ಸುರೇಂದ್ರ, ಡಿಆರ್‍ಎಫ್‍ಓ ವಿ. ಮುತ್ತುರಾಜು, ಗಸ್ತುಪಾಲಕರಾದ ತಿರುಪತಿ ಪೂಜಾರ, ಕುಮಾರ್, ದೇವರಾಜ ಬಂಡಿವಡ್ಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.