ಕಾಯಪಂಡ ಶಶಿ ಸೋಮಯ್ಯ/ ದುಗ್ಗಳ ಸದಾನಂದ

ನಾಪೋಕ್ಲು, ಏ. 3: ಕೊಡವ ಕುಟುಂಬಗಳ ನಡುವಿನ ಹಾಕಿ ಕಲರವ ಭಾನುವಾರದಿಂದ (ನಾಳೆಯಿಂದ) ಆರಂಭಗೊಳ್ಳಲಿದ್ದು, ವಾರ್ಷಿಕ ಹಾಕಿ ಹಬ್ಬದ ಶುಭಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ನಾಪೋಕ್ಲುವಿನಲ್ಲಿ ಆರನೆಯ ಬಾರಿಗೆ ಹಾಕಿ ಉತ್ಸವ ಜರುಗುತ್ತಿದ್ದು, ಇನ್ನು ಸುಮಾರು 10 ವರ್ಷಗಳ ತನಕ ನಾಪೋಕ್ಲುವಿನಿಂದ ಹೊರ ಭಾಗದಲ್ಲಿ ಈ ಹಾಕಿ ಪಂದ್ಯಾವಳಿ ನಿಗದಿಗೊಂಡಿರುವ ಹಿನ್ನೆಲೆಯಲ್ಲಿ ನಾಲ್ಕುನಾಡಿನ ಜನತೆಗೆ ಕೆಲ ವರ್ಷಗಳ ಕಾಲ ತಮ್ಮ ನೆಲದಲ್ಲಿ ಹಾಕಿಯ ವಿಜೃಂಭಣೆಗೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಉತ್ಸವ ಒಂದಷ್ಟು ವಿಶೇಷವಾಗಿ ಈ ಭಾಗದಲ್ಲಿ ಹಾಕಿ ಅಭಿಮಾನಿಗಳನ್ನು ಸೆಳೆಯಲಿದೆ.

ಗಿನ್ನಿಸ್ ದಾಖಲೆ, ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ವಿಶ್ವದಾಖಲೆ ಸೃಷ್ಟಿಸುವುದರೊಂದಿಗೆ ಮುಂದುವರಿಯುತ್ತಿರುವ ದೇಶ - ವಿದೇಶಗಳಲ್ಲೂ ಗಮನ ಸೆಳೆದಿರುವ ಹಾಕಿ ಉತ್ಸವವನ್ನು ಈ ಬಾರಿ ಚೇನಂಡ ಕುಟುಂಬಸ್ಥರು ಆಯೋಜನೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ.

ಕೊಡವ ಹಾಕಿ ಅಕಾಡೆಮಿಯ ಸಾರಥ್ಯದಲ್ಲಿನ 26ನೆಯ ವರ್ಷದ ಹಾಕಿ ಪಂದ್ಯಾವಳಿ ಇದಾಗಿದ್ದು, ಭಾನುವಾರದಂದು ಉದ್ಘಾಟನೆಗೊಳ್ಳಲಿದೆ. ಇದಕ್ಕಾಗಿ ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸಜ್ಜಾಗಿದೆ. ಜನರಲ್ ತಿಮ್ಮಯ್ಯ ಮುಖ್ಯ ಮೈದಾನ ಸೇರಿದಂತೆ ಅದರ ಒತ್ತಿನಲ್ಲಿರುವ ಎರಡು ಮೈದಾನ ಹಾಗೂ ಸೀನಿಯರ್ ಕಾಲೇಜು ಮೈದಾನವೂ ಪಂದ್ಯಾವಳಿಗೆ ಸಿದ್ಧಗೊಂಡಿದೆ.

ಮುಖ್ಯ ಮೈದಾನದ ಸುತ್ತಲೂ ಸುಮಾರು 30 ಸಾವಿರ ಮಂದಿಗೆ ಸ್ಥಳಾವಕಾಶವಿರುವಂತಹ ಬೃಹತ್ ಗ್ಯಾಲರಿ ಈಗಾಗಲೇ ಸಿದ್ಧಗೊಂಡಿದೆ. ಸುಮಾರು 1500 ಮಂದಿ ಕೂರುವ ವ್ಯವಸ್ಥೆ ಇರುವ ವಿಐಪಿ ಗ್ಯಾಲರಿಯ ಕೆಲಸವೂ ಮುಕ್ತಾಯ ಹಂತದಲ್ಲಿದ್ದು, ಈ ಜಾಗದಲ್ಲಿ ಕುರ್ಚಿಗಳ ವ್ಯವಸ್ಥೆ ಇರಲಿದೆ.

ಚೇನಂಡ ಕುಟುಂಬಸ್ಥರು ಎಲ್ಲಾ ಮೈದಾನಗಳ ಸಮರ್ಪಕತೆ, ಸುತ್ತಮುತ್ತಲ ಸ್ಥಳಗಳಲ್ಲಿನ ವ್ಯವಸ್ಥೆ, ವಾಣಿಜ್ಯ ಮಳಿಗೆಗಳ ನಿರ್ಮಾಣ, ಮೈದಾನ ವ್ಯಾಪ್ತಿಯಲ್ಲಿ ಕಟೌಟ್‍ಗಳು, ಮ್ಯಾಟ್ ಅಳವಡಿಕೆ, ಗೋಲುಪೆಟ್ಟಿಗೆ ಅಳವಡಿಕೆ ಸೇರಿದಂತೆ ಇನ್ನಿತರ ಅಗತ್ಯತೆಗಳತ್ತ ಶ್ರಮವಹಿಸಿದ್ದು, ಸ್ವಯಂ ಸೇವಕರುಗಳಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಪುರುಷರು, ಮಹಿಳೆಯರು ಮಕ್ಕಳು ಇದರಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಕಂಡು ಬಂದಿತು. ಚೇನಂಡ ಕುಟುಂಬದ ಆತಿಥ್ಯಕ್ಕೆ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಕೆ. ಬೋಪಣ್ಣ ನೇತೃತ್ವದ ತಂಡವೂ ಕೈಜೋಡಿಸಿದೆ. ಟಾಟಾ ಸಂಸ್ಥೆಯ ಸಹಕಾರದೊಂದಿಗೆ 4ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮೈದಾನದ ನಿರ್ವಹಣೆ ಕೆಲಸ ಈ ಹಿಂದಿನ ವರ್ಷಗಳಂತೆ ಪರಿಣತರಾದ ರಾಜು ಉಸ್ತುವಾರಿಯಲ್ಲಿ ನಡೆಯುತ್ತಿದೆ. ರೋಲರ್ ಅನ್ನು ಬಳಸಿ ಮೈದಾನವನ್ನು ವ್ಯವಸ್ಥಿತವಾಗಿ ಪಂದ್ಯಾಟಕ್ಕೆ ಸಿದ್ಧಮಾಡಲಾಗಿದೆ.

ಮೈದಾನ ಪ್ರವೇಶಿಸುವ ಸ್ಥಳದಲ್ಲಿ ಈ ಹಿಂದಿನ ವರ್ಷಗಳ ಹಾಕಿ ಐತಿಹ್ಯವನ್ನು ಪ್ರತಿಬಿಂಬಿಸುವ ಮಾದರಿಯ ಮ್ಯೂಸಿಯಂ ಸೇರಿದಂತೆ ಹಾಕಿ ಉತ್ಸವದ ಜನಕ ಪಾಂಡಂಡ ಎಂ. ಕುಟ್ಟಪ್ಪ ಅವರ ಪುತ್ಥಳಿಯನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಈ ಬಾರಿಯ ಪಂದ್ಯಾವಳಿಗೆ ನಾಪೋಕ್ಲುವಿನಲ್ಲಿ ನಡೆದಿರುವ ಪಂದ್ಯಾವಳಿಗಳಲ್ಲಿನ ದಾಖಲೆ ಎಂಬಂತೆ 383 ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ.

5 ಎ ಸೈಡ್ ಮಹಿಳಾ ಹಾಕಿಗೆ ಈಗಾಗಲೇ 50ಕ್ಕೂ ಅಧಿಕ ತಂಡಗಳು ಹೆಸರು ದಾಖಲಿಸಿಕೊಂಡಿದ್ದು, ಇದಕ್ಕೆ ಇನ್ನಷ್ಟು ಕಾಲಾವಕಾಶವಿದೆ. ಪ್ರಾಯೋಜಕತ್ವ ಒದಗಿಸಿರುವ ಸಂಸ್ಥೆಗಳ ಜಾಹೀರಾತು ಫಲಕ, ಫ್ಲೆಕ್ಸ್‍ಗಳ ಅವಳಡಿಕೆಯ ಸಿದ್ಧತೆಯೂ ನಡೆದಿದ್ದು, ಭಾನುವಾರದಿಂದ ಒಂದು ತಿಂಗಳ ತನಕ ನಾಪೋಕ್ಲು ಪಟ್ಟಣದಲ್ಲಿ ಹಾಕಿ ಕಲರವ ಕಂಡು ಬರಲಿದೆ.