ಪೆÇನ್ನಂಪೇಟೆ, ಏ. 4: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತ್ರಿಕಾಡು ಪೈಸಾರಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ಕಟ್ಟಿ ಶಾಶ್ವತ ಸೂರಿಗಾಗಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ.

ಕೊಡಗು ಜಿಲ್ಲಾ ಬಹುಜನ ಕಾರ್ಮಿಕ ಸಂಘಟನೆಯ ಮುಂದಾಳತ್ವದಲ್ಲಿ ಅಮ್ಮತ್ತಿ, ಕಾರ್ಮಾಡು, ಬಿಳುಗುಂದ ಹಾಗೂ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 80 ರಿಂದ 90 ಆದಿವಾಸಿ ಹಾಗೂ ದಲಿತ ಕುಟುಂಬಗಳು ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾದೇಶ್ ಮಾತನಾಡಿ, ಮನೆ ನಿರ್ಮಿಸಿಕೊಂಡು ಜೀವನ ನಡೆಸಲು ಕೇವಲ 3 ಸೆಂಟು ಜಾಗಕ್ಕಾಗಿ ಹೋರಾಟ ನಡೆಸುತ್ತಿದ್ದು, ಯಾವುದೇ ಇಲಾಖೆಯ ಅಧಿಕಾರಿಗಳು ಸ್ಪಂದಿಸಿಲ್ಲ. ಈ ಕುರಿತು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರಿಗೂ ಮನವಿ ಪತ್ರ ಸಲ್ಲಿಸಿದ ಮೇರೆಗೆ ಕೂಡಲೇ ಸ್ಪಂದಿಸಿದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಈ ಕುರಿತು ಗಮನಹರಿಸಿ ಜಾಗ ಮಂಜೂರಾತಿ ಮಾಡುವಂತೆ ಆದೇಶ ನೀಡಿದ್ದಾರೆ. ಆದರೂ ಜಿಲ್ಲಾಡಳಿತ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಸ್ಪಂದನ ನೀಡಿಲ್ಲ ಎಂದು ಆರೋಪಿಸಿದರು. ಹೋರಾಟಗಾರ್ತಿ ಸರೋಜ, ಕಿರಣ್ ಜಗದೀಶ್, ಕೋತ್ರಿಕಾಡು ಪೈಸಾರಿ ಬಹುಜನ ಕಾರ್ಮಿಕ ಸಂಘಟನಾ ಸಮಿತಿ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಯಶೋಧ, ಭವ್ಯ, ಗೀತಾ, ಕವಿತ, ಕಾವೇರಿ, ರಾಣಿ, ಕೌಶಿಕ್, ಜ್ಯೋತಿ, ಸಂಘಟನೆಯ ಪದಾಧಿಕಾರಿಗಳು ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.