ಚೆಟ್ಟಳ್ಳಿ, ಏ. 4: ಸರ್ಕಾರಿ ಜಾಗದಲ್ಲಿ ನಿವೇಶನರಹಿತ ಬಡ ಕುಟುಂಬಗಳಿಗೆ ಶಾಶ್ವತ ನಿವೇಶನ ಮಂಜೂರು ಮಾಡಬೇಕೆಂದು ಒತ್ತಾಯಿಸಿ 29 ಕುಟುಂಬಗಳು ಕಳೆದ ಒಂದು ವರ್ಷದಿಂದ ಪೆÇನ್ನತ್‍ಮೊಟ್ಟೆ ಸರಕಾರಿ ಜಾಗದಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿ ವಾಸಿಸುತ್ತಿವೆ. ಹೋರಾಟಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿವಾಸಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿ ಕೇಕ್ ಕತ್ತರಿಸಿ ವಿಶೇಷ ಭೋಜನದೊಂದಿಗೆ ಸಂಭ್ರಮಾಚರಣೆ ನಡೆಸಿದರು.
ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಪೆÇನ್ನತ್‍ಮೊಟ್ಟೆ ಸರ್ಕಾರಿ ಜಾಗವನ್ನು ಬಡವರಿಗೆ ಮಂಜೂರು ಮಾಡದೆ ಹಲವು ವರ್ಷಗಳಿಂದ ವಿಳಂಬ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಶೆಡ್‍ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವರ್ಷ ಕಳೆದರೂ ಇನ್ನೂ ಶಾಶ್ವತ ನಿವೇಶನ ಮಂಜೂರಾತಿ ಆಗದಿರುವುದು ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.
ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರ ತಂದೆ ರಾಮ್‍ಜಿ ಸಕ್ಪಾಲ್ ಅವರ ಹೆಸರನ್ನು ಹೋರಾಟದ ತಾಣಕ್ಕೆ ಇಟ್ಟು ‘ರಾಮ್‍ಜಿ ಸಕ್ಪಾಲ್ ನಿವೇಶನ’ ಎಂದು ನಾಮಕರಣ ಮಾಡಲಾಗಿದೆ ಎಂದು ಪೆÇನ್ನತ್‍ಮೊಟ್ಟೆಯ ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಸೌಕತ್ತಾಲಿ ಮಾಹಿತಿ ನೀಡಿದರು.
ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಕುಟುಂಬಗಳು ಸರ್ಕಾರ ತಕ್ಷಣ ಸ್ಪಂದಿಸಿ ಬಡವರಿಗೆ ಶಾಶ್ವತ ಸೂರು ಕಲ್ಪಿಸಬೇಕು ಎಂದು ಆಗ್ರಹಿಸಿವೆ. ಒಂದು ವರ್ಷದ ಹೋರಾಟದ ಬಳಿಕವೂ ನ್ಯಾಯ ಸಿಗದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಕರುಣ್ ಕಾಳಯ್ಯ