ಚೆಟ್ಟಳ್ಳಿ, ಏ.3: ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಪರಿಣಾಮ ಕೊಡಗಿನ ಆರ್ಥಿಕ ಚಟುವಟಿಕೆಗಳ ಮೇಲೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಹಲವು ವರ್ಷಗಳಿಂದ ಜಿಲ್ಲೆಯ ತೋಟಗಳು, ಕಟ್ಟಡ ಕಾಮಗಾರಿಗಳು ಮತ್ತು ವ್ಯಾಪಾರ ವಹಿವಾಟು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕರು ಮತದಾನಕ್ಕಾಗಿ ತಮ್ಮ ಊರುಗಳಿಗೆ ತೆರಳಿರುವುದರಿಂದ ಕೊಡಗಿನಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ.

ಜಿಲ್ಲೆಯ ಕಾಫಿ, ಮೆಣಸು, ಏಲಕ್ಕಿ ಹಾಗೂ ಇತರ ಕೃಷಿ ತೋಟಗಳಲ್ಲಿ ನಿತ್ಯದ ಕೆಲಸಗಳೆಲ್ಲ ಅಸ್ಸಾಂ ಕಾರ್ಮಿಕರ ಮೇಲೆಯೇ ಅವಲಂಬಿತವಾಗಿದ್ದವು. ಕುಯಿಲು ಕೆಲಸ, ಗಿಡಗಂಟಿ ತೆರವು, ಗೊಬ್ಬರ ಹಾಕುವುದು, ಕಾಫಿ ತೋಟಗಳ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳು ಇದೀಗ ಕಾರ್ಮಿಕರಿಲ್ಲದೆ ಸ್ಥಗಿತಗೊಂಡಿವೆ.

ಸರಿಯಾದ ಸಮಯಕ್ಕೆ ಕೆಲಸ ಪೂರ್ಣಗೊಳ್ಳದಿದ್ದರೆ ಉತ್ಪಾದನೆ ಮೇಲೂ ಪರಿಣಾಮ ಬೀಳುವ ಆತಂಕ ತೋಟ ಮಾಲೀಕರಲ್ಲಿ ಮನೆ ಮಾಡಿದೆ.

ಕಟ್ಟಡ ಕಾಮಗಾರಿಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ವಾಣಿಜ್ಯ ಕಟ್ಟಡಗಳು ಹಾಗೂ ರಸ್ತೆಪಕ್ಕದ ಸಣ್ಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಊರಿಗೆ ತೆರಳಿರುವುದರಿಂದ ಅನೇಕ ಕಾಮಗಾರಿಗಳು ನಿಧಾನಗೊಂಡಿವೆ.

ಕೆಲವು ಕಡೆಗಳಲ್ಲಿ ಗುತ್ತಿಗೆದಾರರು ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ಇದರಿಂದ ವೆಚ್ಚ ಹೆಚ್ಚಳವಾಗುವುದರ ಜೊತೆಗೆ ಕಾಮಗಾರಿ ಪೂರ್ಣಗೊಳ್ಳುವ ಅವಧಿಯೂ ಮುಂದೂಡಲ್ಪಡುತ್ತಿದೆ.

ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಇದರ ಪರಿಣಾಮ ಇನ್ನಷ್ಟು ಗಂಭೀರವಾಗಿದೆ. ಅಂಗಡಿಗಳಲ್ಲಿ ಸರಕು ಇಳಿಸುವುದು, ಹೊರೆ ಹೊರುವ ಕೆಲಸ, ಗೋದಾಮು ನಿರ್ವಹಣೆ ಹಾಗೂ ದಿನನಿತ್ಯದ ಸಹಾಯಕ ಕೆಲಸಗಳಲ್ಲಿ ಅಸ್ಸಾಂ ಕಾರ್ಮಿಕರೇ ಬೆನ್ನೆಲುಬಾಗಿದ್ದರು.

ಇದೀಗ ಕಾರ್ಮಿಕರಿಲ್ಲದೆ ಕೆಲ ಅಂಗಡಿಗಳು ಸಮಯಕ್ಕೆ ತೆರೆಯಲಾಗದೆ, “ಕಾರ್ಮಿಕರ ಕೊರತೆಯಿಂದ ಅಂಗಡಿ ಮುಚ್ಚಲಾಗಿದೆ” ಎಂಬ ಬೋರ್ಡ್ ಹಾಕಿ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿರುವ ದೃಶ್ಯಗಳು ಹಲವು ಕಡೆಗಳಲ್ಲಿ ಕಂಡುಬಂದಿವೆ.

ಜಿಲ್ಲೆಯಲ್ಲಿ ಸ್ಥಳೀಯ ಕಾರ್ಮಿಕರ ಕೊರತೆ ಈಗಾಗಲೇ ಸವಾಲಾಗಿದ್ದರೆ, ಅಸ್ಸಾಂ ಚುನಾವಣೆಯ ಹಿನ್ನೆಲೆ ಅದನ್ನು ಮತ್ತಷ್ಟು ತೀವ್ರಗೊಳಿಸಿದೆ. ಚುನಾವಣೆ ಮುಗಿದ ಬಳಿಕ ಕಾರ್ಮಿಕರು ಮರಳುವ ನಿರೀಕ್ಷೆಯಿದ್ದರೂ, ಅಷ್ಟರವರೆಗೆ ತೋಟ ಮಾಲೀಕರು, ಕಟ್ಟಡ ಗುತ್ತಿಗೆದಾರರು ಮತ್ತು ವ್ಯಾಪಾರಿಗಳು ಸಂಕಷ್ಟದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. - ಕರುಣ್ ಕಾಳಯ್ಯ