ಸಿದ್ದಾಪುರ, ಏ. 3: ಅರಣ್ಯ ಪ್ರದೇಶದಲ್ಲಿ ಕಸವನ್ನು ಎಸೆದಿದ್ದ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಗ್ರಾ.ಪಂ. ಕಸವನ್ನು ವಿಲೇವಾರಿಗೊಳಿಸಿದೆ.
ಕುಶಾಲನಗರ ವಲಯ ಅರಣ್ಯ ಪ್ರದೇಶದ ಬದಿಯಲ್ಲಿ ಕಸವನ್ನು ವಿಲೇವಾರಿ ಮಾಡುತ್ತಿರುವುದನ್ನು ಗ್ರಾಮಸ್ಥರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಸುರಿದಿದ್ದ ಕಸವನ್ನು ಅಲ್ಲಿಂದ ತೆಗೆಯಲಾಗಿದೆ.
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಬಳಸಿದ ಸಿಮೆಂಟ್ನ ಪ್ಲಾಸ್ಟಿಕ್ ಚೀಲ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಪಂಚಾಯಿತಿ ಕಸವಿಲೇವಾರಿ ವಾಹನದ ಮೂಲಕ ತಂದು ಮಾಲ್ದಾರೆ-ಪಿರಿಯಾಪಟ್ಟಣ ಮಾರ್ಗದ ಮೀಸಲು ಅರಣ್ಯದ ಬದಿಯಲ್ಲಿ ವಿಲೇವಾರಿ ಮಾಡುತ್ತಿದ್ದರು. ಇದನ್ನು ಆ ಮಾರ್ಗವಾಗಿ ತೆರಳುತ್ತಿದ್ದ ವ್ಯಕ್ತಿ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಎಚ್ಚೆತ್ತುಕೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರಣ್ಯ ಪ್ರದೇಶದ ಬಳಿ ಸುರಿದಿದ್ದ ಪ್ಲಾಸ್ಟಿಕ್ ಚೀಲಗಳನ್ನು ಅಲ್ಲಿಂದ ತೆರವುಗೊಳಿಸಿ ಕ್ರಮಕೈಗೊಂಡಿದ್ದಾರೆ.