ಗೋಣಿಕೊಪ್ಪಲು, ಏ. ೨: ಕೊಡಗಿನ ರೈತರ ಪ್ರಮುಖ ಬೆಳೆಗಳಾದ ಕಾಫಿ, ತೆಂಗು ಅಡಿಕೆ, ಕರಿಮೆಣಸು, ಈ ಬಾರಿಯ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಆದರೆ ಸಕಾಲದಲ್ಲಿ ಕಾಫಿ ಮಂಡಳಿ, ಕೃಷಿ, ತೋಟಗಾರಿಕಾ ಇಲಾಖೆ ಹಾಗೂ ಕಂದಾಯ ಇಲಾಖೆಯು ಸಮೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಇದರಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ಇನ್ನೂ ಕೂಡ ಲಭಿಸದಿರಲು ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಆರೋಪ ಮಾಡಿದರು.
ಗೋಣಿಕೊಪ್ಪಲುವಿನ ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಮನು ಸೋಮಯ್ಯ, ಕೊಡಗಿನ ರೈತರಿಗೆ ಇಲ್ಲಿನ ವಾರ್ಷಿಕ ಬೆಳೆಗಳೆ ಆಧಾರ ಸ್ಥಂಭವಾಗಿವೆೆ. ಈ ಬಾರಿ ನಿಗದಿತ ಬೆಳೆಗಳು ರೈತನ ಕೈ ಸೇರಲಿಲ್ಲ. ಆದರೆ ನಷ್ಟದಲ್ಲಿರುವ ರೈತನ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಇಲಾಖೆಗಳು ಮೌನವಹಿಸಿವೆ. ಜನಪ್ರತಿನಿಧಿಗಳು ರೈತರ ಬಗ್ಗೆ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ರೈತರಿಗೆ ಬೆಳೆ ಪರಿಹಾರ ಕೂಡಲೇ ಒದಗಿಸಬೇಕು. ಜಿಲ್ಲಾಡಳಿತವೂ ಸಂಬAಧಿಸಿದ ಇಲಾಖೆಯೊಂದಿಗೆ ಸಭೆ ನಡೆಸಿ, ೧೦ ದಿನದೊಳಗೆ ಬೆಳೆ ಪರಿಹಾರದ ಬಗ್ಗೆ ರೈತರಿಗೆ ಉತ್ತರಿಸಬೇಕು. ತಪ್ಪಿದಲ್ಲಿ ರೈತ ಸಂಘದಿAದ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ ಮಾಚಯ್ಯ, ನಲ್ಲೂರಿನ ರೈತ ಮುಖಂಡರಾದ ತೀತರಮಾಡ ಸುನೀಲ್ ಉಪಸ್ಥಿತರಿದ್ದರು.