ಕಣಿವೆ, ಮಾ. ೩೦: ಕಳೆದ ಮೂರು ವರ್ಷಗಳ ಮೊದಲು ಹಿಂದಿನ ಸರ್ಕಾರ ತೆರೆದಿದ್ದ ಹೊಸ ವಿವಿಗಳನ್ನು ಮುಚ್ಚುವ ನಿರ್ಧಾರಕ್ಕೆ ರಾಜ್ಯದ ಈಗಿನ ಸರ್ಕಾರ ಮುಂದಾಗಿದೆ ಎಂಬ ವಿಚಾರ ವಿಧಾನಸೌಧದ ಮೊಗಸಾಲೆಯಲ್ಲಿ ಸದ್ದಿಲ್ಲದೇ ಮೊಳಗಿದೆ.

ಕಳೆದ ಬಿಜೆಪಿ ಸರ್ಕಾರ ತೆರೆದಿದ್ದ ಏಳು ಹೊಸ ವಿವಿಗಳಿಗೆ ಕನಿಷ್ಟ ಮೂಲ ಸೌಕರ್ಯಗಳಾಗಲೀ, ಸೂಕ್ತ ಅನುದಾನವಾಗಲೀ ನೀಡದ ಸರ್ಕಾರ ಇದೀಗ ಆರಂಭವಾಗಿ ಮೂರು ವರ್ಷಗಳ ಬಳಿಕ ಹೊಸ ವಿವಿಗಳಿಗೆ ಅಂತಿಮ ಮೊಳೆ ಹೊಡೆಯಲು ಸನ್ನದ್ಧದಂತೆ ಕಾಣುತ್ತಿದೆ! ಈ ಏಳರ ಪೈಕಿ ಕೊಡಗು ವಿವಿಯೂ ಒಂದು ಎಂಬುದು ಬಹಳ ಖೇದಕರ ಸಂಗತಿ. ಹೊಸ ವಿವಿಗಳು ಆರಂಭವಾದ ನಂತರ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬAತೆ ವರ್ಷಕ್ಕೊಮ್ಮೆ ಇಂತಹುದೇ ತಗಾದೆ ತೆಗೆಯುತ್ತಿರುವ ಆಳುವ ಸರ್ಕಾರ ವಿವಿ ಮುಚ್ಚುವ ನಿರ್ಧಾರ ಚರ್ಚಿಸುತ್ತಿರುವುದು ವಿವಿ ಯಲ್ಲಿ ಕಲಿಯುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಕೊಡಗಿನ ಶಿಕ್ಷಣಾಭಿಮಾನಿಗಳಿಗೆ ಇನ್ನಿಲ್ಲದ ಸಂಕಟ ತಂದೊಡ್ಡಿದೆ.

ಸಾರ್ವಜನಿಕ ಕಳೆದ ೨೦೨೫ ರಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವಿವಿಗಳಿಗೆ ಅನುದಾನ ನೀಡದೇ ಮುಚ್ಚುವ ನಿರ್ಧಾರ ಕೈಗೊಂಡ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಿತ್ತು. ಇದೀಗ ಈ ಸಮಿತಿ ಕೆಲವು ವಿಶ್ವವಿದ್ಯಾಲಯಗಳನ್ನು ಅವುಗಳ ಮೂಲ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ಕುರಿತು ಕಳೆದ ಶುಕ್ರವಾರ ವಿಧಾನಸೌಧದಲ್ಲಿ ಉಪ ಸಮಿತಿಯ ಸಭೆ ನಡೆಸಿತ್ತು.

ಉನ್ನತ ಶಿಕ್ಷಣ ಇಲಾಖೆಯ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುರಿತು ವಿಶೇಷವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾದ ಏಳು ಹೊಸ ವಿಶ್ವವಿದ್ಯಾಲಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಮಿತಿಯ ಮುಂದೆ ಇಟ್ಟಿದೆ. ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿ ಸಂಯೋಜಿತ ಕಾಲೇಜುಗಳ ಸಂಖ್ಯೆ, ಸಿಬ್ಬಂದಿಗಳ ಸಂಖ್ಯೆ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ವಿವಿಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳು, ಲಭ್ಯವಿರುವ ಮೂಲ ಸೌಕರ್ಯಗಳು, ಸೂಕ್ತ ಭೂಮಿ ಹೀಗೆ ಎಲ್ಲಾ ಆಯಾಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿತ್ತು.

ಹೀಗೆ ಪಡೆದ ಮಾಹಿತಿಗಳನ್ನು ಪರಿಶೀಲಿಸಲಾಗಿ ಸರ್ಕಾರದ ನೆರವಿನ ಮೂಲಕ ಯಾವ ವಿಶ್ವವಿದ್ಯಾಲಯಗಳನ್ನು ಬಲಪಡಿಸಬಹುದು ಮತ್ತು ಯಾವ ವಿಶ್ವವಿದ್ಯಾಲಯಗಳನ್ನು ಮೂಲ ವಿಶ್ವವಿದ್ಯಾಲಯಗಳೊಂದಿಗೆ ಮರಳಿ ವಿಲೀನಗೊಳಿಸಬಹುದು ಎಂಬ ಬಗ್ಗೆ ಸಮಿತಿ ಚರ್ಚೆ ನಡೆಸಿದೆ.

ಈ ಸಂದರ್ಭದಲ್ಲಿ ಕೇವಲ ೩೦ ರಿಂದ ೪೦ ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ಪರದಾಡುತ್ತಿರುವ ವಿವಿಗಳನ್ನು ವಿಲೀನಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ. ಇದೇ ವೇಳೆ ವಿವಿಗಳಲ್ಲಿ ನಿವೃತ್ತಿ ವೇತನ ಮತ್ತು ಇತರ ಪ್ರಯೋಜನಗಳನ್ನು ನಿರ್ವಹಿಸಲು ಪ್ರತ್ಯೇಕ ನಿಧಿಯನ್ನು ಹೊಂದಿರಬೇಕು ಎಂಬ ಬಗ್ಗೆ ಸಮಿತಿಯಲ್ಲಿ ಚರ್ಚೆ ನಡೆದಿದೆ.

ಅಂತಿಮ ತೀರ್ಮಾನವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಕೆಲವು ವಿವಿಗಳನ್ನು ಅವುಗಳ ಮೂಲ ವಿಶ್ವವಿದ್ಯಾಲಯಗಳ ಜೊತೆ ವಿಲೀನಗೊಳಿಸುವ ಚರ್ಚೆ ಸರ್ಕಾರದ ನೆರವಿನ ಮೂಲಕ ಯಾವ ವಿವಿಗಳನ್ನು ಬಲಪಡಿಸಬಹುದು ಎಂಬ ಬಗ್ಗೆಯೂ ಸಭೆ ಗಂಭೀರವಾಗಿ ಚಿಂತನೆ ನಡೆಸಿದೆ. ಈಗಾಗಲೇ ಕೊಡಗು ವಿವಿ ನೂರು ಎಕರೆ ವಿಶಾಲವಾದ ಭೂಮಿಯನ್ನು ಹೊಂದಿದೆ. ಜೊತೆಗೆ ಕಳೆದ ಮೂರು ವರ್ಷಗಳ ಈಚೆಗೆ ಸುಸಜ್ಜಿತವಾದ ತರಗತಿ ಹಾಗೂ ಆಡಳಿತ ಕಟ್ಟಡಗಳನ್ನು ಹೊಂದಿದೆ.

ಗುಡ್ಡಗಾಡು ಪ್ರದೇಶಗಳಿಂದ ಕೂಡಿದ ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳು ಹಾಗೂ ಬಡತನ ರೇಖೆಯಿಂದ ಕೆಳಗಿರುವ ಬಡ ಕುಟುಂಬಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುತ್ತಿದ್ದ ಕೊಡಗು ವಿವಿ ಮುಚ್ಚಿದರೆ ಕೊಡಗಿನ ಶಿಕ್ಷಣಕ್ಕೆ ಮಾಡಿದ ಮಹಾದ್ರೋಹವಾಗುತ್ತದೆ ಎಂಬುದು ಜಿಲ್ಲೆಯ ಅಸಂಖ್ಯ ಶಿಕ್ಷಣಾಭಿಮಾನಿಗಳ ಎಚ್ಚರಿಕೆ ಎಂದರೆ ತಪ್ಪಾಗಲಾರದು. ಇನ್ನಾದರೂ ಸರ್ಕಾರ ಕೊಡಗು ವಿವಿ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಜಿಲ್ಲೆಗೆ ಬಂದಿರುವ ವಿವಿಯನ್ನು ಉಳಿಸುವತ್ತ ಮುಂದಾಗಬೇಕು ಎಂಬುದು ಕೊಡಗು ವಿವಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಎಸ್.ಕೃಷ್ಣೇಗೌಡ ಅವರ ಒತ್ತಾಯವಾಗಿದೆ. ವರದಿ : ಕೆ.ಎಸ್.ಮೂರ್ತಿ