ಮಡಿಕೇರಿ, ಮಾ. ೩೦: ಕೊಡಗು ಜಿಲ್ಲೆಯ ಪೊಲೀಸರ ಕಾರ್ಯನಿರ್ವಹಣೆಯ ಬಗ್ಗೆ ರಾಜ್ಯದಲ್ಲಿ ಉತ್ತಮ ಅಭಿಪ್ರಾಯವಿದೆ. ಇದೇ ರೀತಿ ಉತ್ತಮ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕೆAದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರೂ ಆಗಿರುವ ಡಾ. ಎಂ.ಎ. ಸಲೀಂ ಅವರು ಕರೆ ನೀಡಿದರು.
ಭಾನುವಾರದಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಮಹಾನಿರ್ದೇಶಕ (ಡಿಜಿ) ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ, ಕುಂದು ಕೊರತೆಗಳ ವಿಚಾರಣಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪೊಲೀಸರು ಜನತೆಯ ವಿಶ್ವಾಸ ಗಳಿಸಿಕೊಂಡು ಕೆಲಸ ನಿರ್ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆ ಹಾಗೂ ಜನತೆಯೊಂದಿಗಿನ ಬಾಂಧವ್ಯ ಉತ್ತಮವಾಗಿರಬೇಕೆಂದು ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಸೇರಿದಂತೆ ಜಿಲ್ಲೆಯ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ ಠಾಣೆಗೆ ಭೇಟಿ
ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಲೀಂ ಅವರು ಕುಶಾಲನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್ಪಿ ಬಿಂದುಮಣಿ ಅವರೂ ಈ ಸಂದರ್ಭ ಹಾಜರಿದ್ದರು.
ಈ ಹಿಂದೆ ಸಲೀಂ ಅವರು ಎಎಸ್ಪಿಯಾಗಿದ್ದ ಸಂದರ್ಭದಲ್ಲಿ ಸೋಮವಾರಪೇಟೆ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.