ಮಡಿಕೇರಿ, ಮಾ. ೩೦: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ೧೦ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ ಏಪ್ರಿಲ್ ೧೮ ಹಾಗೂ ೧೯ ರಂದು ಮಡಿಕೇರಿಯ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮಾಜದ ಸಲಹೆಗಾರ ಪಿ.ಎಂ. ರವಿ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೩೭ ಸಾವಿರದಷ್ಟು ಮೊಗೇರ ಸಮುದಾಯದವರಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊಗೇರ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದ್ದು, ೪ ರಿಂದ ೫ ಸಾವಿರ ಜನ ಸೇರುವ ನಿರೀಕ್ಷೆ ಇದೆ. ಏ. ೧೮ ರಂದು ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಈಗಾಗಲೇ ೬೦ ತಂಡಗಳು ನೋಂದಾಯಿಸಿಕೊAಡಿವೆ. ೪ ಓವರ್ಗಳ ಪಂದ್ಯಾಟ ಇದಾಗಿರುತ್ತದೆ. ಏ. ೧೯ ರಂದು ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ. ಇದರೊಂದಿಗೆ ಪುರುಷರ ೪೦೦ ಮೀಟರ್ ಓಟ, ಮಹಿಳೆಯರ ೨೦೦ ಮೀಟರ್ ಓಟ, ಮಹಿಳೆಯರಿಗಾಗಿ ಲೆಮೆನ್ ಆ್ಯಂಡ್ ಸ್ಪೂನ್, ೬೦ ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ, ೩ ವರ್ಷ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ೩ ರಿಂದ ೬ನೇ ತರಗತಿ ವಿದ್ಯಾರ್ಥಿಗಳಿಗೆ ೧೦೦ ಮೀಟರ್ ಓಟ, ೭ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ೩೦೦ ಮೀಟರ್ ಓಟ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ೪೦೦ ಮೀಟರ್ ಓಟ, ಮಹಿಳೆಯರಿಗೆ ಸಂಗೀತ ಕುರ್ಚಿ ಆಟೋಟಗಳು ನಡೆಯಲಿವೆ. ಇದರೊಂದಿಗೆ ಏ. ೧೮ ರ ರಾತ್ರಿ ಹೊನಲು ಬೆಳಕಿನ ಕಬಡ್ಡಿ ಪಂದ್ಯವನ್ನು ನಡೆಸಲಾಗುವುದು ಎಂದು ವಿವರಿಸಿದರು. ಏ. ೧೯ ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಮುದಾಯದವರು ಭರತನಾಟ್ಯ, ನಾಟಕ, ಏಕಪಾತ್ರಾಭಿನಯ, ಜಾನಪದ ಗೀತೆ, ಮಿಮಿಕ್ರಿ, ಸಾಮೂಹಿಕ ನೃತ್ಯ, ಛದ್ಮವೇಷ ಸ್ಪರ್ಧೆ, ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶವಿದೆ. ನೋಂದಾಯಿಸಲು ೯೮೮೬೫೦೩೩೬೭ ಅಥವಾ ೭೯೭೫೧೦೩೩೬೮ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಕ್ರೀಡಾಕೂಟ ತಂಡಗಳ ನೊಂದಾಣಿಗೆ ೮೨೭೭೨೭೭೭೩೦ ಅಥವಾ ೯೮೪೫೭೩೨೪೮೮ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕ್ರೀಡಾಕೂಟಕ್ಕೆ ಸರಕಾರದ ಅನುದಾನಕ್ಕೆ ಕೋರಲಾಗಿದೆ. ಇದರೊಂದಿಗೆ ಸಮುದಾಯ ಭವನ ನಿರ್ಮಾಣಕ್ಕೂ ಮನವಿ ಮಾಡಲಾಗಿದೆ. ಸರಕಾರ ಸಮುದಾಯದ ಕೋರಿಕೆಯನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮೊಗೇರ ಸೇವಾ ಸಮಾಜ ಅಧ್ಯಕ್ಷ ಪಿ.ಬಿ. ಜನಾರ್ಧನ್, ಸದಸ್ಯ ಪಿ.ಬಿ. ಸುರೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಸಿ. ರಘು, ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಜಿ. ಚಂದ್ರು, ಕಾರ್ಯದರ್ಶಿ ಪಿ.ಸಿ. ರಮೇಶ್ ಹಾಜರಿದ್ದರು.