ಮಡಿಕೇರಿ, ಮಾ. ೩೦: ದೈವನರ್ತನದ ರೀತಿಯಲ್ಲಿ ವೇಷ ಧರಿಸಿ ಅನುಚಿತವಾಗಿ ನಡೆದುಕೊಂಡಿರುವ ರೀತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.
ಇದು ಧಾರ್ಮಿಕ ಭಾವನೆಗೆ ಧಕ್ಕೆ ತರಿಸುವ ಕೃತ್ಯ ಎಂಬ ಆರೋಪದೊಂದಿಗೆ ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರನ್ನೂ ನೀಡಲಾಗಿದ್ದು, ಆರು ಮಂದಿಯ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಮ್ಮೆಮಾಡುವಿನಲ್ಲಿ ಕಳೆದೆರಡು ದಿನಗಳ ಹಿಂದೆ, ಹಿಂದೂ ಸಂಸ್ಕೃತಿಗೆ ಒಳಪಡದ ಅನ್ಯಕೋಮಿನ ವಿವಾಹವೊಂದು ಜರುಗಿದೆ. ಈ ಸಮಾರಂಭದಲ್ಲಿ ಮದುಮಗ ಕೊರಗಜ್ಜ ದೇವರ ವೇಷ ಧರಿಸಿದ್ದಾನೆ. ಇತರ ಕೆಲವರು ದೇವರನ್ನು ಹೀಯಾಳಿಸುವ ರೀತಿಯಲ್ಲಿ ಅವರ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾ ಅವಹೇಳನ ಮಾಡುವಂತೆ ವರ್ತಿಸಿದ್ದಾರೆ.
ಪೂರ್ವಜರ ನಂಬಿಕೆ ಹಾಗೂ ಸಂಸ್ಕೃತಿಯನ್ನು, ಧರ್ಮವನ್ನು ಅಪಹಾಸ್ಯ ಮಾಡಿರುವುದು ಈ ವೀಡಿಯೋದಲ್ಲಿ ಕಂಡು ಬಂದಿದೆ ಎಂದು ರಾಧಾಕೃಷ್ಣ ರೈ ಎಂಬವರು ಇನ್ನಿತರ ಹಿಂದೂಪರ ಸಂಘಟನೆ ಪ್ರಮುಖರ ಜತೆ ಸೇರಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಇದರಂತೆ ೬ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಎಮ್ಮೆಮಾಡುವಿನವರಾದ ಅಬ್ದುಲ್ ರಷೀದ್, ಹನೀಪ್ ಸಿ.ಎಂ., ಲತೀಫ್ ಸಿ.ಎಂ., ಮಹಮದ್ ಫೈಜಲ್, ಶಕೀಲ್ ಹಾಗೂ ಬಷೀರ್ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಸ್‌ಪಿ ಎಚ್ಚರಿಕೆ
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮದಲ್ಲಿ ನಡೆದಿರುವ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಆ ವೀಡಿಯೋ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸ್ವೀಕರಿಸಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊ.ಸಂ: ೩೭/೨೦೨೬, ಕಲಂ: ೧೯೬(೧) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಬಿಂದುಮಣಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ರೀತಿಯ ಸಂದೇಶ/ ಭಾವಚಿತ್ರ/ ವೀಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯ-ಅಸತ್ಯತೆಯನ್ನು ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿದೆ. ಕೊಡಗು ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಗಾವಹಿಸಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಸುಳ್ಳು ಸುದ್ದಿಯ ಪೋಸ್ಟ್ಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡುವ ಮತ್ತು ಆತಂಕ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.